ತಿಪ್ಪಯ್ಯನ ಕೆರೆಯಲ್ಲಿ ಪಕ್ಷಿ ವೀಕ್ಷಣಾ ಕಾರ್ಯಕ್ರಮ

ಮೈಸೂರು: ಮೈಸೂರ್ ಸೈನ್ಸ್ ಫೌಂಡೇಶನ್ ಮತ್ತು ಅರಣ್ಯ ಔಟ್ ರೀಚ್ ಸಹಯೋಗದೊಂದಿಗೆ ಭಾನುವಾರ ಮೈಸೂರಿನ ರಿಂಗ್ ರಸ್ತೆಯಲ್ಲಿ ಚಾಮುಂಡಿಬೆಟ್ಟದ ತಪ್ಪಿನಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ ಪಕ್ಷಿವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹವ್ಯಾಸಿ ಪಕ್ಷಿತಜ್ಞ ಎಂಪಿ ಸಪ್ತಗಿರೀಶ್‍ರವರು ಪ್ರಕೃತಿಯಲ್ಲಿ ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವಲ್ಲಿ ಕೆರೆಗಳ ಪಾತ್ರ ಮಹತ್ತರವಾದದ್ದು, ಕೆರೆಗಳು ಇದ್ದಲ್ಲಿ ಪಕ್ಷಿಗಳು ಸಹಜವಾಗಿ ಬರುತ್ತವೆ. ಪಕ್ಷಿಗಳ ಬಗ್ಗೆ ತಿಳಿಯಬೇಕಾದರೆ ಅವುಗಳನ್ನು ತೀಕ್ಷಣವಾಗಿ ಗಮನಿಸಬೇಕು. ಅವುಗಳ ಕೊಕ್ಕು ರೆಕ್ಕೆ ಬಾಲ ಕಾಲು ಅವುಗಳು ಮಾಡುವ ಶಬ್ದ ಇವುಗಳಿಂದ ಅವುಗಳನ್ನು ಗುರುತಿಸಬಹುದು ಎಂದು ತಿಳಿಸಿದರು.
ಕೆರೆಗಳು ಇದ್ದರೆ ಮಾತ್ರ ಪಕ್ಷಿಗಳು ಬರುತ್ತವೆ ಅನೇಕ ಕೆರೆಗಳು ಮೈಸೂರಿನಲ್ಲಿ ನಶಿಸಿಹೋಗಿವೆ ಇರುವ ಕೆಲವೇ ಕೆಲವು ಕೆರೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನಾವು ಕೆರೆಗಳ ನಿರ್ಮಾಣ ಮಾಡಬೇಕಾಗಿರುವ ಅವಶ್ಯಕತೆ ಇಲ್ಲ. ಇರುವುದನ್ನು ಉಳಿಸಿಕೊಂಡರೆ ಸಾಕು ಎಂದು ಅವರು ಅಭಿಪ್ರಾಯಪಟ್ಟರು.
ಕಾಜಾಣ ಅಥವ ನೀರು ಕಾಗೆ, ಗೀಜಗ, ಗಿಳಿ, ಪಾರಿವಾಳ, ಗೌಜಲಕ್ಕಿ ಕಾಡುಕೋಳಿ, ಬಕ ಪಕ್ಷಿ, ಮೈನಾ, ಕೊಕ್ಕರೆ ಇನ್ನೂ ಮುಂತಾದ ಸುಮಾರು 35ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳನ್ನು ವೀಕ್ಷಣೆ ಮಾಡಲಾಯಿತು.
ಪಕ್ಷಿ ವೀಕ್ಷಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಪಕ್ಷಿ ಪ್ರೇಮಿಗಳು ಭಾಗವಹಿಸಿದ್ದರು. ಮೈಸೂರಿನ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ರಾಜು, ಮೆಡಿಕಲ್ ಕಾಲೇಜಿನ ಡಾ. ವಿ ಸವಿತಾ, ಹರಿವಿದ್ಯಾಲಯದ ಮುಖ್ಯಸ್ಥ ಭಗವಾನ್, ಮೈಸೂರು ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಸಂತೋಷ್ ಕುಮಾರ್ ಅವರು ಉಪಸ್ಥಿತರಿದ್ದರು.