ಗ್ರಾ.ಪಂ ಚುನಾವಣೆ: ಬಿಜೆಪಿ ಗೆದ್ದ ಸದಸ್ಯರ ಪಟ್ಟಿ ಬಿಡುಗಡೆ ಮಾಡಲಿ -ಧೃವನಾರಾಯಣ್ ಸವಾಲು

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸಿದ್ದಾರೆಂದು ಮಾಜಿ ಸಂಸದ ಆರ್. ದೃವನಾರಾಯಣ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹಾಸ್ಯಾಸ್ಪದ ಹೇಳಿಕೆ ನೀಡಿ, ಬಿಜೆಪಿ ಬೆಂಬಲಿತರು ಅತಿ ಹೆಚ್ಚು ಸ್ಥಾನ ಗೆದ್ದಿದ್ದಾರೆ ಎಂದು ಹೇಳುವ ಮೂಲಕ ಹಿಟ್ ಅಂಡ್ ರನ್ ಕೇಸ್ ನಂತೆ ಹೇಳಿದ್ದಾರೆ. ಅವರು ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ದೃವನಾರಾಯಣ್ ಸವಾಲು ಹಾಕಿದರು.
ರಾಜ್ಯದಲ್ಲಿ 32829 ಮಂದಿ ಕಾಂಗ್ರೆಸ್ ನ ಬೆಂಬಲಿತ ಸದಸ್ಯರು ಜಯ ಗಳಿಸಿದ್ದಾರೆ. ಬಿಜೆಪಿಯ 30853 ಮತ್ತು ಜೆಡಿಎಸ್ ನ 16841 ಮಂದಿ ಬೆಂಬಲಿತರು ಗೆದ್ದಿದ್ದಾರೆಂದು ದೃವನಾರಾಯಣ್ ಅಂಕಿ ಅಂಶ ನೀಡಿದರು.
ಹಾಗೆಯೇ ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 129 ಗ್ರಾಮಪಂಚಾಯ್ತಿಗಳ ಪೈಕಿ 76ರಲ್ಲಿ ಗೆಲುವು ಸಾಧಿಸಿದೆ. ಮೈಸೂರು ಜಿಲ್ಲೆಯಲ್ಲಿ 2159 ಮಂದಿ ಪೈಕಿ 1135 ಮಂದಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆಂದ ಅವರು, ಮೈಸೂರಿನಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿದೆ ಎಂದು ಟೀಕಿಸಿದರು.
ಈ ಮೂಲಕ ಚಾಮರಾಜನಗರ ಹಾಗೂ ಮೈಸೂರು ಕಾಂಗ್ರೆಸ್ ನ ಭದ್ರ ಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಹೇಳಿದರು.
ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜ. 13ರಂದು ವರುಣದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಹಾಗೆಯೇ ಹೆಚ್.ಡಿಕೋಟೆ, ಕೆ.ಆರ್ ನಗರ, ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಧೃವನಾರಾಯಣ್ ಹೇಳಿದರು.
ವಿಧಾನ ಪರಿಷತ್ ಗದ್ದಲದ ವಿಚಾರದಲ್ಲಿ ನಾವು ನಿರಪರಾಧಿಗಳು ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಎಂಎಲ್ ಸಿ ಧರ್ಮಸೇನಾ ಹೇಳಿದರು.
ಪರಿಷತ್‍ನಲ್ಲಿ ನಡೆದ ಗದ್ದಲ ಇದು ಜೆಡಿಎಸ್ ಬಿಜೆಪಿಯ ಪೂರ್ವ ನಿಯೋಜಿತ ಕೃತ್ಯ. ಗದ್ದಲದ ವಿಚಾರದಲ್ಲಿ ನಾವು ನಿರಪರಾಧಿಗಳು ಎಂದು ಅವರು ತಿಳಿಸಿದರು.
ಪರಿಷತ್ ನಲ್ಲಿ ಆದ ಗದ್ದಲದ ಹಿಂದಿನ ದಿನ ಬಿಜೆಪಿ ಮಂತ್ರಿಯೊಬ್ಬರ ಮನೆಯಲ್ಲಿ ಉಪಸಭಾಪತಿ ಪೀಠಕ್ಕೆ ಕೂರಿಸಲು ಚರ್ಚೆ ನಡೆದಿತ್ತು ಎಂದು ಧರ್ಮಸೇನ ದೂರಿದರು.
ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಖಂಡರಾದ ಸುನಿಲ್ ಬೋಸ್, ಎಸ್.ಡಿ.ರವಿಶಂಕರ್, ಜಿ.ವಿ.ಸೀತಾರಾಮ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.