ಮೈಸೂರು: ಬಿತ್ತನೆ ಬೀಜ ಉತ್ಪಾದನೆ ಕಂಪನಿಯೊಂದರ ಅಧಿಕೃತ ಲೋಗೋ ಬಳಸಿ ಬಿತ್ತನೆ ಭತ್ತ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ನಗರದ ಕೆ. ಆರ್. ಠಾಣೆ ಪೊಲೀಸರು ದಾಳಿ ನಡೆಸಿ ತಲಾ ಹತ್ತು ಕೆಜಿ ತೂಕದ ಒಟ್ಟು 528 ಪ್ಯಾಕೆಟ್ ಬಿತ್ತನೆ ಭತ್ತವನ್ನು ವಶಪಡಿಸಿಕೊಂಡಿದ್ದಾರೆ.
ತೆಲಂಗಾಣದ ಲಿವಿಂಗ್ ಸೀಡ್ ಟೆಕ್ನಾಲಜೀಸ್ ನ ಸೂಪರ್ ಆಮನ್ ಇಂಪ್ರೂವ್ಡ್ ಪ್ಯಾಡಿ ಕಂಪನಿಯು ಬಿತ್ತನೆ ಭತ್ತ ಮಾರಾಟ ಮಾಡುತ್ತಿದೆ. ಆದರೆ ಈ ಕಂಪನಿಯ ಲೋಗೋವನ್ನುಅಕ್ರಮವಾಗಿ ಬಳಸಿಕೊಂಡಿರುವ ಕಾರ್ತಿಕೇಯನ್ ಕ್ರಾಫ್ಟ್ ಟೆಕ್ನಾಲಜೀಸ್ ಕಂಪೆನಿ ತಾನು ಉತ್ಪಾದಿಸಿದ ಬಿತ್ತನೆ ಬೀಜವನ್ನು ಮಾರಾಟ ಮಾಡಿ ಗ್ರಾಹಕರಿಗೆ ವಂಚಿಸುತ್ತಿದೆ. ಈ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಿವಿಂಗ್ ಸೀಡ್ ಟೆಕ್ನಾಲಜೀಸ್ ನ ಹಿರಿಯ ಮಾರಾಟ ವ್ಯವಸ್ಥಾಪಕ ವೆಂಕಟೇಶ್ ಕೆ.ಆರ್.ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ತಿಕೇಯನ್ ಕ್ರಾಫ್ಟ್ ಟೆಕ್ನಾಲಜೀಸ್ ನ ಸಬ್ ಡೀಲರ್ ಕೃಷ್ಣಮೂರ್ತಿ, ನಿರ್ದೇಶಕ ಹರಿನಾಥ್ ಚಾಕಲ್ಲಿ, ಗಾಡಿಚಲ್ಲಾ ಶ್ರೀಹರಿರಾವ್ ಎಂಬವರ ವಿರುದ್ಧ ದೂರು ನೀಡಲಾಗಿದೆ.
ದೂರಿನ ಮೇರೆಗೆ ಕೆ.ಆರ್.ಠಾಣೆ ಪೆÇಲೀಸರು ವೀಣೆ ಶೇಷಣ್ಣ ಭವನ ರಸ್ತೆಯಲ್ಲಿನ ಕಾರ್ತಿಕೇಯನ್ ಕ್ರಾಫ್ಟ್ ಟೆಕ್ನಾಲಜೀಸ್ ನ ಸಬ್ ಡೀಲರ್ ಕೃಷ್ಣಮೂರ್ತಿ ಎಂಬವರ ಮಳಿಗೆ ಮೇಲೆ ದಾಳಿ ನಡೆಸಿ, 5280 ಕೆಜಿ ಬಿತ್ತನೆ ಭತ್ತದ ಪ್ಯಾಕೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.