ಮೈಸೂರು: ನಕಲಿ ಔಷಧಿ ಜಾಲವನ್ನು ನಗರದ ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿ ನಕಲಿ ಔಷಧಿಯನ್ನು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಬೆಳಗಾಂ ಜಿಲ್ಲೆ ಗೋಕಾಕ್ ನ ಬಾಂಬೆ ಚಾಲ್ ನ ಪ್ಲಾಟ್ ನಂ. 21ರ ವಾಸಿ
ಕುಮಾರ್ ಗುರಪ್ಪ ಬಾಗಲ್ ಕೋಟ್ (39), ಬೆಳಗಾಂ ಜಿಲ್ಲೆಯ ಗೋಕಾಕ್ ನ ಅಂಬೇಡ್ಕರ್ ನಗರದ ಅಬ್ದುಲ್ ಕಲಾಂ ಶಾಲೆ ಹತ್ತಿರದ ವಾಸಿ ಪ್ರಶಾಂತ್ ಅರ್ಜುನ್ ತಳವಾರ (24), ಜನತಾ ಪ್ಲಾಟ್‍ನ ಓಂ ಶಾಂತಿ ರೋಡ್ ನಿವಾಸಿ ಚಂದ್ರು (25) ಹಾಗೂ ಮೂಲತಃ ನವದೆಹಲಿಯ ಜಹರೇರಾ ವಿಲ್ಹೇಜ್‍ನವನಾದ ಹಾಲಿ ಮೈಸೂರು ಪಡುವಾರಹಳ್ಳಿಯ ಗುರು ಪಿ.ಜಿ. ವಾಸಿ ಹರ್ಷದ್ (32) ಬಂಧಿತ ಆರೋಪಿಗಳು.
ಬಂಧಿತರು ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಕಾಯಿಲೆಯುಳ್ಳ ಅಮಾಯಕ ಜನರನ್ನು ಗುರ್ತಿಸಿ, ವಿವಿಧ ಕಾಯಿಲೆಗಳಿಗೆ ನಾವು ಉತ್ತಮವಾದ ಆಯುರ್ವೇದ ಔಷಧಿಯನ್ನು ನೀಡುತ್ತೇವೆ ಎಂದು ನಂಬಿಸಿ ತಮ್ಮ ವಂಚನೆಯ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದರು.
ಪರಂಪರ ಆಯುರ್ವೇದಿಕ್, ಸಿದ್ಧಿವಿನಾಯಕ ಆಯುರ್ವೇದಿಕ್, ಸಾಯಿರಾಮ್ ಆಯುರ್ವೇದಿಕ್, ಧನ್ವಂತರಿ ಆಯುರ್ವೇದಿಕ್ ಎಂಬ ಹಲವಾರು ಹೆಸರುಗಳಲ್ಲಿ ನಕಲಿ ಔಷಧಿ ಅಂಗಡಿಗಳನ್ನು ತೆರೆದು ಈ ಅಂಗಡಿಗಳಿಗೆ ರೋಗಿಗಳನ್ನು ಬರಮಾಡಿಕೊಂಡು ಯಾವುದೋ ಪೌಡರ್‍ಗಳನ್ನು ಬಹು ಉತ್ಕøಷ್ಟ ಮಟ್ಟದ ಆಯುರ್ವೇಧ ಔಷದಿಗಳೆಂದು ಅವರಿಗೆ ನಂಬಿಸಿ, ರಾಜ್ಯದ ವಿವಿಧ ಭಾಗದ ಸಾವಿರಾರು ಜನರಿಗೆ ವಂಚಿಸಿ, ಲಕ್ಷಾಂತರ ರೂಗಳನ್ನು ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಶಾಂತ್ ಅರ್ಜುನ್ ತಳವಾರ, ಚಂದ್ರು, ಹರ್ಷದ್ ಎಂಬುವರನ್ನು ಸಿಸಿಬಿ ಪೊಲೀಸರು ಜ. 1ರಂದು ನಗರದ ವಿದ್ಯಾರಣ್ಯಪುರಂನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ನಂತರ ಮೈಸೂರು ವಿಮಾನ ನಿಲ್ದಾಣದಿಂದ ಬೆಳಗಾಂಗೆ ವಿಮಾನದ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದ ಈ ಪ್ರಕರಣದ ಪ್ರಮುಖ ಆರೋಪಿ ಕುಮಾರ್ ಗುರಪ್ಪ ಬಾಗಲ್ ಕೋಟ್ ನನ್ನು ಜ. 5ರಂದು ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಕುಮಾರ್ ಗುರಪ್ಪ ಬಾಗಲ್ ಕೋಟ್ ತಮ್ಮ ಊರಿನ ಕಡೆಯ ಹುಡುಗರುಗಳನ್ನು ಈ ಅಕ್ರಮ ವ್ಯವಹಾರಕ್ಕೆ ಬಳಸಿಕೊಂಡು ಮೈಸೂರು, ಬೆಂಗಳೂರು, ಹೈದರಾಬಾದ್, ಹುಬ್ಬಳ್ಳಿ ಮತ್ತು ಇತರೆ ಕಡೆಗಳಲ್ಲಿ ಈ ನಕಲಿ ಆಯುರ್ವೇದ ಔಷಧಿಗಳ ಕೇಂದ್ರ ತೆಗೆದು ಇವುಗಳ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡು ವಿಮಾನದ ಮೂಲಕ ಓಡಾಡಿಕೊಂಡು ಐಷರಾಮಿ ಜೀವನ ನಡೆಸುತ್ತಿದ್ದನೆಂಬುದು ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ.
ಇದೇ ರೀತಿ ಮೈಸೂರಿನ ವಿದ್ಯಾರಣ್ಯಪುರಂನ ಸಾರ್ವಜನಿಕ ಹಾಸ್ಟಲ್ ರಸ್ತೆ, ಸೇಂಟ್ ಥಾಮಸ್ ಶಾಲೆ ಎದುರಿನ 8ನೇ ಮೇನ್ ನಲ್ಲಿ ಪರಂಪರ ಆಯುರ್ವೇದಿಕ್ ಎಂಬ ಕೇಂದ್ರವನ್ನು ತೆರೆದು ಹಲವಾರು ಅಮಾಯಕರಿಗೆ ನಕಲಿ ಔಷಧಿ ನೀಡಿ ವಂಚಿಸಿದ್ದರೆಂಬ ಅಂಶ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಕುಮಾರ್ ಗುರಪ್ಪ ಬಾಗಲ್ ಕೋಟ್ ವಿರುದ್ಧ ಈ ಹಿಂದೆ ಹುಬ್ಬಳ್ಳಿ, ಆಂಧ್ರ ಪ್ರದೇಶದಲ್ಲಿ ಇದೇ ರೀತಿಯ ನಕಲಿ ಔಷಧಿ ಮಾರಾಟಕ್ಕೆ ಸಂಬಧಿಸಿದಂತೆ ವಂಚನೆ ಪ್ರಕರಣಗಳು ದಾಖಲಾಗಿದೆಯಂತೆ.
ಆರೋಪಿಗಳಿಂದ ನಕಲಿ ಔಷಧಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ಡಿ.ಸಿ.ಪಿ.ಗಳಾದ ಡಾ. ಎ.ಎನ್. ಪ್ರಕಾಶ್ ಗೌಡ, ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಘಟಕದ ಎ.ಸಿ.ಪಿ. ವಿ. ಮರಿಯಪ್ಪರವರ ನೇತೃತ್ವದಲ್ಲಿ ಸಿ.ಸಿ.ಬಿ.ಘಟಕದ ಪೊಲೀಸ್ ಇನ್ಸ್‍ಪೆಕ್ಟರ್ ಆರ್.ಜಗದೀಶ್ ಮತ್ತು ಸಿಬ್ಬಂದಿಗಳು ಈ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.