ಬಿಜೆಪಿ ಸರ್ಕಾರದಲ್ಲಿ ಕೇವಲ ವಸೂಲಿ ಕಾರ್ಯಕ್ರಮ ನಡೆಯುತ್ತಿದೆ -ಮಾಜಿ ಸಚಿವ ಹೆಚ್. ಡಿ. ರೇವಣ್ಣ

ಹಾಸನ: ಬಿಜೆಪಿ ಸರ್ಕಾರದಲ್ಲಿ ಕೇವಲ ವಸೂಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಹೇಳಿದರು.
ನಗರದಲ್ಲಿ ಸೋಮವಾರ ರೇವಣ್ಣ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಯಾವ್ಯಾವ ಇಲಾಖೆಯಲ್ಲಿ ಎಷ್ಟು ಹಣ ಲೂಟಿ ನಡೆಯುತ್ತಿದೆ ಅಂತ ನಾನು ಹೇಳುತ್ತೇನೆ. ಸಮಯ ಬಂದಾಗ ಎಲ್ಲ ದಾಖಲೆ ಸಮೇತ ವಿವರಿಸುತ್ತೇನೆ ಎಂದು ರೇವಣ್ಣ ತಿಳಿಸಿದರು.
ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ರಣಘಟ್ಟ ಯೋಜನೆ ಜಾರಿಗೊಳಿಸಿದ್ದರು. ಆದರೆ ಬಿಜೆಪಿ ಇದು ನಮ್ಮ ಕೊಡುಗೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಹೆಚ್.ಡಿ. ರೇವಣ್ಣ ತಿಳಿಸಿದರು.
2019-20ನೇ ಸಾಲಿನಲ್ಲಿ ಬಜೆಟ್ ಮಂಡಿಸಿದ ಎಚ್ .ಡಿ .ಕುಮಾರಸ್ವಾಮಿ 100 ಕೋಟಿ ರೂ. ವೆಚ್ಚದಲ್ಲಿ ಯಗಚಿ ನದಿಯ ರಣಘಟ್ಟ ಪಿಕಪ್ ನಿಂದ ನೀರನ್ನು ಪಡೆದು ಬೇಲೂರು ಹೋಬಳಿಯ ದ್ವಾರಸಮುದ್ರ ಕೆರೆ ಕರಿಕಟ್ಟೆಹಳ್ಳಿ ಕೆರೆ ಮತ್ತು ಇತರ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಮಂಡಿಸಿದ್ದರು. ಆದರೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ರಣಘಟ್ಟ ಯೋಜನೆ ಬಿಜೆಪಿ ಪಕ್ಷದಿಂದ ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆಂದರು.
ಜಿಲ್ಲೆಗೆ ಬಿಜೆಪಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ರೇವಣ್ಣ ಅವರು ಸಚಿವ ಗೋಪಾಲಯ್ಯ ಅವರೇ ಸುಳ್ಳು ಹೇಳಬೇಡಿ; ನೀವು ಮೂರ್ನಾಲ್ಕು ಬಾರಿ ಶಾಸಕರಾಗಿದ್ದೀರಿ. ಯೋಜನೆ ಬಜೆಟ್ ಬುಕ್ ನಲ್ಲಿ ಇದೆ. ಬೇಕಿದ್ದರೆ ಬಜೆಟ್ ಬುಕ್ ತೆಗೆದು ನೋಡಿ ಎಂದು ರೇವಣ್ಣ ಹೇಳಿದರು.
ದೇವೇಗೌಡ ಅವರು ಇನ್ನೂ ಬದುಕಿದ್ದಾರೆ ಅವರ ಕಣ್ಣು ಮುಂದೆಯೇ ಜಿಲ್ಲೆ ಸಂಪೂರ್ಣ ಅಭಿವೃದ್ಧಿ ಮಾಡುತ್ತೇನೆ ಎಂದು ರೇವಣ್ಣ ಸವಾಲು ಹಾಕಿದರು.