ಮೈಸೂರು: ಕೋವಿಡ್ ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನಕ್ಕೆ ಇದೇ ಜ. 16ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದು, ಅಂದು ಮೈಸೂರು ಜಿಲ್ಲೆಯಲ್ಲಿಯೂ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ.
ಲಸಿಕೆ ವಿತರಣೆ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಬುಧವಾರ ವೀಡಿಯೋ ಸಂವಾದ ನಡೆಸಲಾಯಿತು.
ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಅರುಂಧತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ರಾಜ್ಯಕ್ಕೆ ಕೋವಿಡ್ ಲಸಿಕೆ ಬಂದಿದ್ದು, ಮೈಸೂರಿಗೆ ಅಂದಾಜು 20,500 ಡೋಸ್ ಲಸಿಕೆ ಬರಲಿದೆ. ಮೊದಲ ಹಂತದಲ್ಲಿ ಕೋವಿಡ್ ಲಸಿಕೆಯನ್ನು ನೋಂದಾಯಿತ ಆರೋಗ್ಯ ಕಾರ್ಯಕರ್ತರಿಗೆ ನೀಡಲಿದ್ದು, ಅದರಂತೆ ಜಿಲ್ಲೆಯಲ್ಲಿ ಲಸಿಕೆ ವಿತರಣೆಗಾಗಿ 9 ಸ್ಥಳಗಳನ್ನು ಗುರುತಿಸಲಾಗಿದೆ.
ಮೈಸೂರಿನ ಎಂಎಂಸಿ ಮತ್ತು ಆರ್‍ಐ (ಪಿಕೆಟಿಬಿ ಆಸ್ಪತ್ರೆ ಆವರಣದ ಟ್ರಾಮ ಕೇರ್ ಸೆಂಟರ್), ಜೆಎಸ್‍ಎಸ್ ಆಸ್ಪತ್ರೆ, ತಿ. ನರಸೀಪುರ, ಎಚ್.ಡಿ. ಕೋಟೆ, ಹುಣಸೂರು, ಕೆ.ಆರ್.ನಗರ, ನಂಜನಗೂಡು, ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆಗಳು ಹಾಗೂ ರಂಗಸಮುದ್ರ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಲಸಿಕೆ ನೀಡಲು ಗುರುತಿಸಲಾಗಿದೆ.
ಮೊದಲ ದಿನ ರಂಗಸಮುದ್ರ ಕೇಂದ್ರದಲ್ಲಿ 60 ಜನರಿಗೆ ಹಾಗೂ ಇತರೆ 8 ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಾಗುವುದು. ಕೋವಿಡ್ ಲಸಿಕೆ ಪಡೆದ ಬಳಿಕ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಲಸಿಕೆ ಪಡೆದವರನ್ನು 30 ನಿಮಿಷಗಳ ಕಾಲ ಸ್ಥಳದಲ್ಲೇ ನಿಗಾ ವಹಿಸಲಾಗುತ್ತದೆ.
ಈಗಾಗಲೇ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಲಸಿಕೆ ಪಡೆಯುವ ದಿನಾಂಕ, ಸಮಯ ಸೇರಿದಂತೆ ವಿವಿಧ ಮಾಹಿತಿಯನ್ನು ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಎಂದು ಆರ್‍ಸಿಎಚ್‍ಒ ಡಾ.ಎಲ್.ರವಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಡಿಸಿಪಿ ಪ್ರಕಾಶ್ ಗೌಡ, ಎಂಎಂಸಿ ಮತ್ತು ಆರ್‍ಐ ಡೀನ್ ಡಾ. ನಂಜರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ. ಅಮರನಾಥ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರೇಮ್‍ಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.