ಮೈಸೂರು: ಯಾವುದೇ ಕಾರಣಕ್ಕೂ ಬೆಮೆಲ್ ಸಂಸ್ಥೆಯನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಭಾರತ್ ಅರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಅಧ್ಯಕ್ಷ ಹೆಚ್.ವೈ.ಮುನಿರೆಡ್ಡಿ ಹೇಳಿದರು.
ನಗರದಲ್ಲಿರುವ ಬೆಮೆಲ್ ಸಂಸ್ಥೆ ಬಳಿ ಸೋಮವಾರ ಉದ್ಯೋಗಿಗಳು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಬೆಮೆಲ್ ಸಂಸ್ಥೆಯನ್ನು ಮಾರಾಟ ಮಾಡಲು ಮುಂದಾಗಿರುವುದನ್ನು ಖಂಡಿಸಿ ಅನೇಕ ಹೋರಾಟಗಳನ್ನು 2017ರಿಂದ ಇಂದಿನವರೆಗೆ ಭಾರತ್ ಅರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಹಮ್ಮಿಕೊಂಡು ಬಂದಿದೆ ಎಂದರು.
ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಬೆಮೆಲ್ ಸಂಸ್ಥೆಯಲ್ಲಿ ಮಾರಾಟ ಮಾಡಬೇಡಿ ಎಂಬ ಮನವಿ ಪತ್ರ ಸಲ್ಲಿಸಿದ್ದೇವೆ ಎಂದವರು ತಿಳಿಸಿದರು.
ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸದೆ ಮಾರಾಟ ಮಾಡಲು ಮುಂದಾದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಯಾವುದೇ ಕಾರಣಕ್ಕೂ ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ಎಂ.ಡಿ.ರಾಜಶೇಖರ ಮೂರ್ತಿ ಸೇರಿದಂತೆ ನೌಕರರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.