ವ್ಯಾನ್ ಹಾಗೂ ಟಿವಿಎಸ್ ಎಕ್ಸ್ ಎಲ್ ನಡುವೆ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಚಾಮರಾಜನಗರ: ತೂಫಾನ್ ವ್ಯಾನ್ ಹಾಗೂ ಟಿವಿಎಸ್ ಎಕ್ಸ್ ಎಲ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತಗ್ಗಲೂರು ಗೇಟ್ ಬಳಿ ಸೋಮವಾರ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬೆಟ್ಟದಮಾದಳ್ಳಿ ಗ್ರಾಮದ ಬೈಕ್ ಸವಾರ ಸಿದ್ದಮಲ್ಲಪ್ಪ (48) ಹಾಗೂ ವ್ಯಾನಿನಲ್ಲಿದ್ದ ತಮಿಳುನಾಡಿನ ಅಮ್ಮಕ್ಕಮ್ಮ (62) ಮೃತಪಟ್ಟ ನತದೃಷ್ಟರು.
ಸಿದ್ದಮಲ್ಲಪ್ಪ ಹಾಗೂ ಮಂತ್ರಿ ನಾಗಪ್ಪ ಎಂಬವರು ಬೆಟ್ಟದಮಾದಳ್ಳಿಯತ್ತ ತೆರಳಲು ಬೈಕ್ ತಿರುಗಿಸಿದಾಗ ಮೈಸೂರಿನಲ್ಲಿ ಮದುವೆ ಸಮಾರಂಭ ಮುಗಿಸಿಕೊಂಡು ಊಟಿಯತ್ತ ತೆರಳುತ್ತಿದ್ದ ವ್ಯಾನ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಇದರಿಂದ ಸಿದ್ದಮಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂತ್ರಿ ನಾಗಪ್ಪ ಎಂಬವರ ಕಾಲು ತುಂಡಾಗಿದೆ. ಡಿಕ್ಕಿಯಾದ ರಭಸಕ್ಕೆ ವ್ಯಾನ್ ಪಲ್ಟಿಯಾಗಿ ಸೇತುವೆಗೆ ಅಪ್ಪಳಿಸಿದ್ದು ವ್ಯಾನಿನಲ್ಲಿದ್ದ ಅಮ್ಮಕ್ಕಮ್ಮ ಸ್ಥಳದಲ್ಲೇ ಅಸುನೀಗಿದ್ದಾರೆ.
ಚಾಲಕ ಸೇರಿ 4 ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.
ಬೇಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.