ಮೈಸೂರು: ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಸೀಮಾ ಎಂಬ ಶ್ವಾನವು ನಿಧನ ಹೊಂದಿದೆ.
ಈ ಶ್ವಾನವು ಇಲಾಖೆಯಲ್ಲಿ ಸುಮಾರು 11 ವರ್ಷ 2 ತಿಂಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ ವಯೋ ಸಹಜ ಖಾಯಿಲೆಯಿಂದ ಜ. 20ರಂದು ಮರಣ ಹೊಂದಿದೆ.
2009ರ ಡಿ. 14ರಿಂದ ಸೂಕ್ತ ತರಬೇತಿಯೊಂದಿಗೆ ಇಲಾಖೆಗೆ ಸೇರಿದ್ದ ಸೀಮಾ ಶ್ವಾನವು ಹಲವು ಡಾಗ್ ಶೋ, ಮಾಕ್ ಡ್ರಿಲ್ (ಅಣುಕು ಕಾರ್ಯಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು.
ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬ ಭದ್ರತೆ ಬಂದೋಬಸ್ತ್ಗಳ ಕರ್ತವ್ಯದ ಸಂಧರ್ಭಗಳಲ್ಲಿ ಎಎಸ್ಸಿ ತಂಡದೊಂದಿಗೆ ಉತ್ತಮ ಕರ್ತವ್ಯ ನಿರ್ವಹಿಸಿದೆ ಸೀಮಾ ಶ್ವಾನ.
2016ನೇ ಸಾಲಿನಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಸೀಮಾ ಶ್ವಾನವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿರುತ್ತದೆ.
ಜಿ. ಮಂಜುರವರು ಇದರ ಈ ಶ್ವಾನದ ತರಬೇತುದಾರರಾಗಿದ್ದರು.
ಸಿಎಆರ್ ಡಿಸಿಪಿ ಶಿವರಾಜುರವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನಗಳನ್ನು ನೇರವೆರಿಸಲಾಯಿತು.
ಈ ಸಮಯದಲ್ಲಿ ಎಸಿಪಿ ಸುದರ್ಶನ್, ಶ್ವಾನದಳದ ಉಸ್ತುವಾರಿ ಅಧಿಕಾರಿ ಕೆ.ಎಂ. ಮೂರ್ತಿ, ಉಪ ನಿರೀಕ್ಷಕ ಸುರೇಶ್ ಹಾಗೂ ಶ್ವಾನ ದಳದ ಇತರೆ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.
ಸೀಮಾ ಶ್ವಾನದ ಸಾವಿಗೆ ಶ್ವಾನದಳದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಕಂಬನಿ ಮಿಡಿದಿದ್ದಾರೆ.