ಶ್ರೀಗಂಧದ ವಸ್ತುಸಂಗ್ರಹಾಲಯ ಸ್ಥಳಾಂತರ ಚಿಂತನೆ ಇದೆ -ಎಸ್.ಟಿ.ಎಸ್

ಮೈಸೂರು: ಶ್ರೀಗಂಧದ ವಸ್ತುಸಂಗ್ರಹಾಲಯದ ಸ್ಥಳಾಂತರದ ಚಿಂತನೆ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಅಶೋಕಪುರಂನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು.
ಮೈಸೂರು ಅರಮನೆ ಮೈದಾನ ಇಲ್ಲವೇ ಮೈಸೂರು ಮೃಗಾಲಯದಲ್ಲಿ ಶ್ರೀಗಂಧದ ವಸ್ತು ಸಂಗ್ರಹಾಲಯ ತೆರೆಯುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಸುಲಭವಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದರು.
ಬೆಲೆಬಾಳುವ ವಸ್ತುಗಳು ಇರುವುದರಿಂದ ಸುರಕ್ಷತೆಯನ್ನು ನೋಡಿಕೊಂಡು ಸೂಕ್ತ ಸ್ಥಳದಲ್ಲಿ ತೆರೆಯುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಯಾರು ಬೇಕಿದ್ದರೂ ವೀಕ್ಷಣೆ ಮಾಡಬಹುದಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ತಿಳಿಸಿದರು.
ಶ್ರೀಗಂಧಕ್ಕೆ ಸರ್ಕಾರದಿಂದ ಪೆÇ್ರೀತ್ಸಾಹ ಕೊಡಲಾಗುತ್ತಿದೆ. ಅಲ್ಲದೆ, ಖಾಸಗಿಯಾಗಿ ಬೆಳೆಸಲು ಸಹ ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಉತ್ತಮ ದರ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಸಚಿವರು ಹೇಳಿದರು.
ಉದ್ಘಾಟನೆ ಬಳಿಕ ವಸ್ತು ಸಂಗ್ರಹಾಲಯದಲ್ಲಿರುವ ಶ್ರೀಗಂಧದ ವಿವಿಧ ತಳಿಗಳು, ಬೇರುಗಳು, ಕಾಂಡಗಳು, ಪ್ರಭೇದಗಳು, ಅವುಗಳ ಉಪಯೋಗಗಳು, ವರ್ಗೀಕರಣದ ವಿವರಗಳು ಸೆರಿದಂತೆ ಶ್ರೀಗಂಧದ ಮರದಿಂದ ಏನೆಲ್ಲ ಔಷಧೀಯ ಗುಣಗಳಿವೆ? ಹಾಗೂ ಅದರಿಂದ ಎಷ್ಟು ಲಾಭ ಮಾಡಬಹುದು? ಎಂಬ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಶ್ರೀಗಂಧದಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನೂ ಪ್ರದರ್ಶನಕ್ಕಿಡಲಾಗಿದ್ದನ್ನೂ ಸಚಿವರು ವೀಕ್ಷಿಸಿದರು.
ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.