ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಡಿಸಿಎಂ ಶ್ರಮ -ಮರಿತಿಬ್ಬೇಗೌಡ

ಮೈಸೂರು: ಸ್ವಾತಂತ್ರ್ಯ ಬಂದ ಮೇಲೆ ಮೂರನೇ ಸಲ ಬದಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮುಕ್ತಕಂಠದಿಂದ ಶ್ಲಾಘಿಸಿದರು.
ನಗರದ ಬೋಗಾದಿಯಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡವನ್ನು ಡಿಸಿಎಂ ಅವರು ಸೋಮವಾರ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮರಿತಿಬ್ಬೇಗೌಡರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹೊತ್ತಿನಲ್ಲಿ ಅಶ್ವತ್ಥನಾರಾಯಣ ಅವರು ಉನ್ನತ ಶಿಕ್ಷಣ ಸಚಿವರಾಗಿರುವುದು ರಾಜ್ಯದ ಸುದೈವ. ನೂತನ ಶಿಕ್ಷಣ ನೀತಿಯ ಕರಡು ರಾಜ್ಯಕ್ಕೆ ಬಂದಾಗಿನಿಂದ ಅವರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದರು.
ಡಿಸಿಎಂ ಅವರು ಸ್ವತಃ ವೈದ್ಯರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿದವರೂ ಕೂಡ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಅವರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಶಿಕ್ಷಣದ ಮಹತ್ವ ಹಾಗೂ ಅದರಿಂದ ಉಂಟಾಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಅವರಿಗೆ ಅತ್ಯುತ್ತಮ ಜ್ಞಾನವಿದೆ. ತಾಯಿ ಚಾಮುಂಡೇಶ್ವರಿ ಅನುಗ್ರಹ ಹಾಗೂ ನಾಡಿನ ಜನರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತೀರಿ. ಹಿಂದೊಮ್ಮೆ ನಾನು ಸದನದಲ್ಲೂ ಇದೇ ಮಾತು ಹೇಳಿದ್ದೆ ಎಂದರು ಮರಿತಿಬ್ಬೇಗೌಡರು.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳು ಮಾತ್ರ ಐಟಿಐಗಳಲ್ಲಿ ವ್ಯಾಸಂಗ ಮಾಡಲು ಬರುತ್ತಾರೆ. ಶ್ರೀಮಂತರ ಮಕ್ಕಳು ಇಲ್ಲಿಗೆ ಬರುವುದಿಲ್ಲ. ಹೀಗಾಗಿ ವಿದ್ಯಾಬ್ಯಾಸ ಮುಗಿದ ತಕ್ಷಣ ಆ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವಂತೆ ಆಗಬೇಕು ಎಂದು ಮರಿತಿಬ್ಬೇಗೌಡರು ಉಪ ಮುಖ್ಯಮಂತ್ರಿಗಳ ಗಮನ ಸೆಳೆದರು.
ಸರಕಾರಿ, ಅನುದಾನಿತ ಹಾಗೂ ಖಾಸಗಿ ಐಟಿಐಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ವ್ಯಾಪ್ತಿಯೊಳಕ್ಕೆ ಈ ಶಿಕ್ಷಣ ಸಂಸ್ಥೆಗಳನ್ನು ತಂದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದರು.