ಬೆಳಗಾವಿ: ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸಚಿವ ರಮೇಶ್ ಜಾರಕಿಹೊಳಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಾರ್ಚ್ ನಂತರ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದ್ದು, ಬೆಳಗಾವಿ ಜಿಲ್ಲೆಗೆ ಮೊತ್ತೊಂದು ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು.
ಅಭಯ್ ಪಾಟೀಲ ಕೂಡ ಸಚಿವಾಕಾಂಕ್ಷಿ ಆಗಿದ್ದಾರೆ, ಪ್ರಯತ್ನ ಕೂಡ ಮಾಡ್ತಿದ್ದಾರೆಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಎಲ್ಲರೂ ನನ್ನ ಸ್ನೇಹಿತರೇ, ಯಾರಿಗಾದರೂ ಸಿಗಲಿ ಖುಷಿ ಪಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೆಸಾರ್ಟ್ ವಾಸ್ತವ್ಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ರಮೇಶ್ ಜಾರಕಿಹೊಳಿ, ಚಿಕ್ಕಮಗಳೂರು ಪ್ರವಾಸ ಒಂದು ವಾರದ ಮೊದಲೇ ನಿಗದಿಯಾಗಿತ್ತು. ನನ್ನ ಪ್ರವಾಸದ ಮಾಹಿತಿ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮೊದಲೇ ಕಳುಹಿಸಲಾಗಿತ್ತು. ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಹಿತಿಯೇ ನನಗಿರಲಿಲ್ಲ. ಆದರೆ ನಮಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ವರದಿ ಬಂದವು ಎಂದರು.