ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ರೈತರನ್ನು ಭಯೋತ್ಪಾದಕರು ಎಂದಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ಖಂಡಿಸಿ ಜಿಲ್ಲಾ ರೈತ ಸಂಘದ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಸಚಿವ ಬಿ. ಸಿ.ಪಾಟೀಲ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ರೈತಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರ, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಪೆÇಲೀಸರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಸಚಿವ ಪಾಟೀಲ್ ಪ್ರತಿಕೃತಿ ಸುಟ್ಟರು.
ರೈತ ಸಂಘದ ಕಾರ್ಯಕರ್ತರು ಶ್ರೀಭುವನೇಶ್ವರಿ ವೃತ್ತದಲ್ಲಿ ಕೃಷಿ ಸಚಿವರ ಪ್ರತಿಕೃತಿ ದಹಿಸಲು ಸಿದ್ದತೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಪ್ರತಿಕೃತಿ ದಹಿಸದಂತೆ ಪ್ರತಿಭಟನಾಕಾರರಿಗೆ ತಡೆಯೊಡ್ಡಿದರು.
ಇದಕ್ಕೆ ಸುಮ್ಮನಾಗದ ರೈತರು ನಮ್ಮನ್ನು ಬಂಧಿಸಿದರು ಸರಿ, ನಾವು ಪ್ರತಿಕೃತಿ ದಹಿಸುತ್ತೇವೆ ಎಂದು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕ್ಕಮಕ್ಕಿ ನಡೆಯಿತು. ಮಾತಿನ ಚಕ್ಕಮಕಿ ನಡುವೆಯೂ ಪ್ರತಿಭಟನಾಕಾರರು ಪ್ರತಿಕೃತಿ ದಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರನ್ನು ಭಯೋತ್ಪಾದಕರು ಎಂದಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎಂದು ಆಗ್ರಹಿಸಿದರು.