ಬೆಂಗಳೂರು: ಮೈಸೂರು ಜಿಲ್ಲೆಗೆ ಬಹಳಷ್ಟು ಕೊಡುಗೆ ನೀಡಿದ್ದಲ್ಲದೆ, ರಾಜಪರಂಪರೆಯ ಕಾಲದಲ್ಲಿಯೇ ಪ್ರಜಾಪ್ರಭುತ್ವದ ಪರಿಕಲ್ಪನೆ ಹೊಂದಿ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದ 10ನೇ ಚಾಮರಾಜ ಒಡೆಯರ್, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವನ್ನು ವಿಧಾನಸಭೆಯಲ್ಲಿ ಅಳವಡಿಸಬೇಕು ಎಂದು ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪತ್ರ ಬರೆದು ಮನವಿ ಮಾಡಿದ್ದಾರೆ.
ಭಾರತದಲ್ಲಿ ಪ್ರಜಾಪ್ರತಿನಿಧಿ ಸಭೆಯ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು, 10ನೇ ಚಾಮರಾಜ ಒಡೆಯರ್ ಅವರು. 1881ರಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದರು. ಆದರೆ, ಇದಕ್ಕೆ ಶಾಸನಬದ್ಧ ಮಾನ್ಯತೆ ನೀಡಿ ಇಂತಹ ಒಂದು ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಇಂತಹ ಒಂದು ಅದ್ಭುತ ಪರಿಕಲ್ಪನೆಯನ್ನು ಅವರು ಪೋಷಿಸಿದ್ದರಿಂದಲೇ ಸಮಾನತೆಯ ಜಾಗೃತಿ ಮೂಡಲು ಕಾರಣವಾಯಿತು. 1923ರಲ್ಲಿ ಹೊಸ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿ ಈ ಸಭೆಯನ್ನು ನಡೆಸಿ, ಜಾತಿ, ವರ್ಗಗಳನ್ನು ನೋಡದೆ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿ ಆದರ್ಶ ಪ್ರಜಾಪ್ರಭುತ್ವದ ಮಾದರಿಯನ್ನು ಹಾಕಿಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಅಲ್ಲದೆ, ಇವರು ಕೃಷ್ಣರಾಜ ಸಾಗರ ಅಣೆಕಟ್ಟು, ಹೊಸ ರೈಲು ಸಂಪರ್ಕಕ್ಕೆ ಮಾರ್ಗಗಳು, ಸಾಮಾಜಿಕ ಕಾನೂನುಗಳ ಜಾರಿ ಸೇರಿದಂತೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇಂಥ ಮಹನೀಯರನ್ನು ಗೌರವಿಸುವ ಮೂಲಕ ಆ ಭಾಗಕ್ಕೆ ಮನ್ನಣೆಯನ್ನು ಕೊಡಬೇಕಿದೆ ಎಂದು ಸಚಿವರು ಮನವಿ ಮಾಡಿದ್ದಾರೆ.
ಹೀಗಾಗಿ ಇಂಥ ಮಹನೀಯರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಗೌರವ ಕೊಡುವ ಕೆಲಸ ನಮ್ಮಿಂದಾಗಬೇಕು. ಈ ನಿಟ್ಟಿನಲ್ಲಿ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೂಕ್ತ ಕ್ರಮ ಕೈಗೊಂಡು 10ನೇ ಚಾಮರಾಜ ಒಡೆಯರ್ ಅವರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಗಳನ್ನು ವಿಧಾನಸಭೆಯಲ್ಲೂ ಅಳವಡಿಸುವಂತೆ ಕ್ರಮ ವಹಿಸುವಂತೆ ಮೈಸೂರು ಜಿಲ್ಲೆಯ ನಾಗರಿಕರ ಪರವಾಗಿ ಮತ್ತು ಉಸ್ತುವಾರಿ ಸಚಿವರಾಗಿ ಎಸ್.ಟಿ.ಸೋಮಶೇಖರ್ ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.