ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಬಿಲ್ ಹಣ ನೀಡಲು ಸಾವಿರಾರು ರೂ. ಲಂಚ ಸ್ವೀಕರಿಸುತ್ತಿದ್ದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗುಂಡ್ಲುಪೇಟೆಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಎಂ. ಶಿವಲಿಂಗಪ್ಪ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಕಡಬೂರು ಗ್ರಾಮ ಕೆ. ಎಸ್. ಮಂಜುನಾಥ್ ಅವರಿಂದ ಶಿವಲಿಂಗಪ್ಪ ಅವರು 50 ಸಾವಿರ ರೂ. ಹಣನ್ನು ಲಂಚದರೂಪದಲ್ಲಿ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಮಂಜುನಾಥ್ ಅವರು ರೈತರ ಜಮೀನುಗಳಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿಗೆ ಅಳವಡಿಸುವ ಉಪಕರಣಗಳನ್ನು ತೋಟಗಾರಿಕೆ ಇಲಾಖೆ ಮೂಲಕ ಟಿ.ಎಂ.ಕೆ.ಎಸ್.ಐ ಯೋಜನೆಯಡಿ ರೈತರ ಜಮೀನುಗಳಿಗೆ ಉಪಕರಣಗಳನ್ನು ಅಳವಡಿಸಿದ್ದರು.
ಈ ಉಪಕರಣಗಳ ಬಿಲ್ ನ ಹಣವನ್ನು ನೀಡಲು ಶಿವಲಿಂಗಪ್ಪ ಅವರು 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಎಸಿಬಿಗೆ ದೂರು ನೀಡಿದ್ದರು.
ಮುಂಜುನಾಥ್ ರಿಂದ ಶಿವಲಿಂಗಪ್ಪ ಅವರು ಲಂಚದ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿ ಅವರಿಂದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಎಸಿಬಿ ಮೈಸೂರು ಪೊಲೀಸ್ ಅಧೀಕ್ಷಕ ಅರುಣಾಂಗ್ಶು ಗಿರಿ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಎಸಿಬಿ ಪೊಲೀಸ್ ಉಪಾಧೀಕ್ಷಕ ಸದಾನಂದ ಎ. ತಿಪ್ಪಣ್ಣನವರ್, ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ, ಎಲ್. ದೀಪಕ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.