ರಿಂಗ್ ರಸ್ತೆ ಅಕ್ಕ ಪಕ್ಕ ಕಸ ಸುರಿದರೆ ಕ್ರಮ -ಸಂಸದ ಪ್ರತಾಪ್ ಸಿಂಹ

ಮೈಸೂರು: ರಿಂಗ್ ರಸ್ತೆಯ ಅಕ್ಕ ಪಕ್ಕ ಕಸ ಸುರಿದರೆ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.
ಮೈಸೂರಿನ ಹಿನಕಲ್ ಜಂಕ್ಷನ್ ನಿಂದ ಇಲವಾಲದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಜಿ.ಟಿ.ದೇವೇಗೌಡರೊಂದಿಗೆ ಪ್ರತಾಪ್ ಸಿಂಹ ಶನಿವಾರ ಚಾಲನೆ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೈಸೂರು ರಿಂಗ್ ರಸ್ತೆಯ ಅಕ್ಕಪಕ್ಕದಲ್ಲಿ ಹೋಟೆಲ್, ಮಳಿಗೆಗಳವರು ಕಸವನ್ನು ತಂದು ಸುರಿಯುತ್ತಿದ್ದು, ಅಂತಹವರಿಗೆ ಈಗ ಎಚ್ಚರಿಕೆ ನೀಡಲಾಗುತ್ತಿದೆ. ಮತ್ತೆ ಕಸ ಹಾಕುವುದು ಪುನರಾವರ್ತನೆಯಾದಲ್ಲಿ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನ ನಲ್ವತ್ತ್ಮೂರುವರೆ ಕಿ.ಮೀ ರಿಂಗ್ ರಸ್ತೆ, ಮೈಸೂರು ಹಿನಕಲ್ ಸಿಗ್ನಲ್ ನಿಂದ ಮನುಗನಹಳ್ಳಿವರೆಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಬ್ರಿಸ್, ಕಸ, ಕೋಳಿ, ಸೆಲೂನ್ ಗಳಲ್ಲಿ ಇರುವ ತ್ಯಾಜ್ಯಗಳನ್ನೆಲ್ಲ ತಂದು ಸುರಿಯಲಾಗುತ್ತಿದೆ ಎಂದವರು ತಿಳಿಸಿದರು.
ಇನ್ನು ಮೂರು ದಿನಗಳೊಳಗಾಗಿ ಈ ರಸ್ತೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಈಗ ನಲ್ವತ್ತ್ಮೂರೂವರೆ ಕಿ.ಮೀ ವರೆಗೆ ರಿಂಗ್ ರಸ್ತೆಗೆ ಡಾಂಬರೀಕರಣ ಮಾಡಲು ಸುಮಾರು 161 ಕೋಟಿ ರೂ. ಬಿಡುಗಡೆ ಮಾಡಿದೆ ಎಂದವರು ಹೇಳಿದರು.
ಇಂದು ಬೆಳಿಗ್ಗೆ ಏರ್ ಪೆÇೀರ್ಟ್ ಗೆ ಹೋಗುವಾಗ ಯಾರೋ ಕಸ ಸುರಿಯುತ್ತಿದ್ದರು. ಅವರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಅವರು ಮತ್ತೆ ಕಸವನ್ನು ವಾಪಸ್ ತೆಗೆದುಕೊಂಡು ಹೋದರು ಎಂದು ಪ್ರತಾಪ್ ಸಿಂಹ ಹೇಳಿದರು.
ಮಾಧ್ಯಮದವರು ಜನರಿಗೆ ಪೌರ ಪ್ರಜ್ಞೆಯನ್ನು ಬೆಳೆಸುವ ಕೆಲಸ ಮಾಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.
ಕೃಷಿ ಕಾಯ್ದೆ ವಿರೋಧಿಸಿ ರಸ್ತೆ ತಡೆ ನಡೆಸುವ ರೈತರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೃಷಿಯ ಮೂರು ಕಾಯ್ದೆಗಳಲ್ಲಿ ಏನು ಲೋಪ ದೋಷಗಳಿದೆ, ಮಾರಕ ಅಂಶವೇನಿದೆ ಎಂಬುದರ ಕುರಿತು ತಿಳಿಸಿ ರಸ್ತೆ ತಡೆ ನಡೆಸಲಿ ಎಂದರು.