ಮೈಸೂರಲ್ಲೂ ರೈತರ ಪ್ರತಿಭಟನೆ

ಮೈಸೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ರೈತರು ಶನಿವಾರ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ಚಳಿವಳಿ ನಡೆಸುತ್ತಿದ್ದು, ಮೈಸೂರಿನಲ್ಲಿಯೂ ರೈತರು ಪ್ರತಿಭಟನೆ ನಡೆಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ದ ಕರೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಾಷ್ಟ್ರ ಧ್ವಜ ಹಾಗೂ ಹಸಿರು ಧ್ವಜ ಹಿಡಿದು ರೈತರು ಪ್ರತಿಭಟಿಸಿದರು.
ಹಳ್ಳಿಗಳಿಂದ ಎತ್ತಿನಗಾಡಿಗಳ ಮೂಲಕ ರೈತರು ಪ್ರತಿಭಟನೆಗೆ ಆಗಮಿಸಿ ರಿಂಗ್ ರಸ್ತೆಯ ಬಂಡೀಪಾಳ್ಯ ವೃತ್ತದಲ್ಲಿ ರೈತರ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.
ದನಕರುಗಳು, ಕುರಿಮರಿಗಳೊಂದಿಗೆ ರಸ್ತೆಯಲ್ಲೇ ರೈತರು ಠಿಕಾಣಿ ಹೂಡಿ, ಮಾನವ ಸರಪಳಿ ರಚಿಸಿ ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು.
ರೈತರು ಕೆಲ ಕಾಲ ರಸ್ತೆ ತಡೆ ನಡೆಸಲು ಪೊಲಿಸರು ಅವಕಾಶ ಕಲ್ಪಿಸಿದ್ದರು.
ಆದರೆ ಪ್ರತಿಭಟನಾ ನಿರತ ರೈತರು ರಸ್ತೆಯಲ್ಲಿಯೇ ಅಡಿಗೆ ಮಾಡಲು ಮುಂದಾದಾಗ ಪೊಲೀಸರು ತಡೆದು ಪ್ರತಿಭಟನಾಕಾರರನ್ನು ಬಂಧಿಸಿದರು.
ರೈತಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ನಗರದ ಕೊಲಂಬಿಯಾ ಏಷಿಯಾ ಸಿಗ್ನಲ್ ಬಳಿಯ ನಾಲ್ಕು ರಸ್ತೆಗಳು ಹಾಗೂ ಮೈಸೂರು-ನಂಜನಗೂಡು ಬಂದ್ ಆಗಿತ್ತು.
ರೈತ ಮುಖಂಡ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಇನ್ನು ರೈತರ ಪ್ರತಿಭಟನೆಗೆ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಸಾಥ್ ನೀಡಿತ್ತು.
ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.