ಮೈಸೂರು ಪುರಭವನದ ಬೇಸ್ಮೆಂಟ್ ಪಾರ್ಕಿಂಗ್: ಉಳಿಕೆ ಕಾಮಗಾರಿಗೆ ಟೆಂಡರ್ ಮಾಡಿ, ಕೆಲಸ ಪೂರ್ಣಗೊಳಿಸಿ -ಸಚಿವ ಎಸ್.ಟಿ.ಎಸ್

ಮೈಸೂರು: ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೈಸೂರು ನಗರದ ಪುರಭವನದ ಬೇಸ್ಮೆಂಟ್ ಪಾರ್ಕಿಂಗ್ ಕಟ್ಟಡ ಮತ್ತು ಹೊರಾಂಗಣ ಅಭಿವೃದ್ಧಿ ಅಪೂರ್ಣ ಕಾಮಗಾರಿಯನ್ನು ಸೋಮವಾರ ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಇಂಥ ದೊಡ್ಡ ಮಟ್ಟದ ಕಾಮಗಾರಿಗಳ ನಿರ್ಲಕ್ಷ್ಯ ಸಲ್ಲ. ಕೂಡಲೇ ಉಳಿಕೆ ಕಾಮಗಾರಿಗೆ ಟೆಂಡರ್ ಕರೆದು ಪೂರ್ತಿಗೊಳಿಸಬೇಕು ಎಂದು ಸೂಚಿಸಿದರು.
ಅರಸು ರಸ್ತೆ, ಅಶೋಕ ರಸ್ತೆ ಹಾಗೂ ಸಯ್ಯಾಜಿ ರಾವ್ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಪಾರ್ಕಿಂಗ್ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ 2011-12ರಲ್ಲಿ 18.28 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಂಡಿಲ್ಲ. ಜೊತೆಗೆ ಕೋರ್ಟ್ ನಲ್ಲಿ ಪ್ರಕರಣವಿದೆ ಎಂದು ಪಾಲಿಕೆ ಇಂಜಿನಿಯರ್ ಗಳು ಸಚಿವರಿಗೆ ಮಾಹಿತಿ ನೀಡಿದರು.
ಪುರಭವನದ ನೆಲಮಹಡಿಯ ವಿಶಾಲ ಪ್ರದೇಶದಲ್ಲಿ 600 ವಾಹನಗಳ ನಿಲುಗಡೆ ಹಾಗೂ ಒಂದು ಆ್ಯಂಪಿ ಥಿಯೇಟರ್ ನಿರ್ಮಾಣದ ಯೋಜನೆ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು, ಇಡೀ ಪಾರ್ಕಿಂಗ್ ವ್ಯಾಪ್ತಿಯಲ್ಲಿ ಸಂಚರಿಸಿ ಹಾಲಿ ಇರುವ ಕಟ್ಟಡದ ಸದೃಢತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದಕ್ಕೆ ಕೆಆರ್‍ಎಸ್ ನ ಕರ್ನಾಟಕ ತಾಂತ್ರಿಕ ಸಂಶೋಧನಾ ಕೇಂದ್ರದಿಂದ ಸದೃಢತೆ ವರದಿಯನ್ನೂ ಪಡೆದಿದ್ದಾಗಿ ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಕಾಮಗಾರಿ ತ್ವರಿತವಾಗಿ ಆಗುವುದರಿಂದ ಮೈಸೂರಿಗೆ ಏನೆಲ್ಲ ಅನುಕೂಲವಾಗಲಿದೆ ಎಂದು ಸಚಿವರು ಇದೇ ವೇಳೆ ಪ್ರಶ್ನಿಸಿದಾಗ, ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪುವುದಲ್ಲದೆ, ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾಮಗಾರಿಯನ್ನು ಟೆಂಡರ್ ಮಾಡಿ, ಅದಕ್ಕೆ ತಮ್ಮಿಂದ ಆಗಬೇಕಾದ ಅನುಕೂಲವನ್ನು ಮಾಡಿಕೊಡುವುದಾಗಿ ಸಚಿವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಲ್ಲದೆ, ಪಾರ್ಕಿಂಗ್ ವ್ಯವಸ್ಥೆ ಒಂದೇ ಕಡೆ ಸ್ಥಳಾಂತರವಾದರೆ ರಸ್ತೆಗಳು ಸಹ ವಿಶಾಲವಾಗಿ ಕಾಣುವುದರ ಜೊತೆಗೆ ನಗರವೂ ಸುಂದರವಾಗಿ ರೂಪುಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ಬಿ.ನಾಗರಾಜು ಹಾಗೂ ಪ್ರಮುಖ ಅಧಿಕಾರಿಗಳು ಹಾಜರಿದ್ದರು.