ಸುತ್ತೂರು: ಕುಟುಂಬದ ಅಭಿವೃದ್ಧಿಗೆ ಸಾಮೂಹಿಕ ವಿವಾಹದಂತಹ ಹೆಜ್ಜೆ ಅತಿ ಅವಶ್ಯ. ಇಂದು ಬಡವರಾದಿಯಾಗಿ ಹೆಚ್ಚಿನವರು ಶಿಕ್ಷಣಕ್ಕಿಂತ ಹೆಚ್ಚಾಗಿ ವಿವಾಹಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಸಾಲದ ಹೊರೆಯಲ್ಲಿ ಸಿಲುಕುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸುತ್ತೂರಿನಲ್ಲಿ ಶ್ರೀಮಠದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ -95 ಕಾರ್ಯಕ್ರಮದಲ್ಲಿ ವಚನಕ್ಕೊಂದು ಕಥೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಸಚಿವರು ಮಾತನಾಡಿದರು.
ಶ್ರೀಕ್ಷೇತ್ರ ಸುತ್ತೂರು ಮಠದ ಈ ಕಾರ್ಯ ಶ್ಲಾಘನೀಯ ಹಾಗೂ ಮಾದರಿ ಎಂದು ಮೈಸೂರು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇಂದು ಸಮಾಜದಲ್ಲಿ ವಿವಾಹಕ್ಕೆ ಅತಿಯಾಗಿ ಖರ್ಚು ಮಾಡುತ್ತಿರುವುದು ಕುಟುಂಬದ ಅಭ್ಯುದಯಕ್ಕೆ ಮಾರಕವಾಗಿದೆ. ಸಾಲ ಮಾಡಿ ಮದುವೆ ಮಾಡಿ ಹತ್ತಾರು ವರ್ಷಗಳಾದರೂ ಸಹ ಸಾಲಮುಕ್ತರಾಗದೆ ಪರಿತಪಿಸುತ್ತಿರುತ್ತಾರೆ ಎಂದರು.
ಶ್ರೀಮಠ ಆಯೋಜಿಸುವ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದರೆ ಸಾಲ ಮಾಡುವ ಸಂಭವವೇ ಇರುವುದಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸುತ್ತೂರು ಜಾತ್ರೆಯು ಕೊರೊನಾ ಸೋಂಕಿನ ಕಾರಣಕ್ಕೆ ಈ ವರ್ಷ ಸರಳವಾಗಿ ಜರುಗುತ್ತಿದೆ. ಸುತ್ತೂರು ಮಠದ ವತಿಯಿಂದ ಅನೇಕ ಸಮಾಜೋದ್ಧಾರಕ ಕಾರ್ಯಗಳು ನಡೆಯುತ್ತಿದ್ದು, ಅದರಲ್ಲಿ ಸಾಮೂಹಿಕ ವಿವಾಹವು ಒಂದು ಎಂದು ಹೇಳಿದರು.
ಜಾತ್ರಾ ಸಂದರ್ಭದಲ್ಲಿ ಸುಮಾರು 200 ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿದ್ದು, ಅದನ್ನು ರದ್ದುಗೊಳಿಸಿ ಇಡೀ ವರ್ಷ ಪ್ರತಿ ತಿಂಗಳು ಉಚಿತ ಮಾಂಗಲ್ಯ ಹಾಗೂ ವಸ್ತ್ರಗಳನ್ನು ವಿತರಿಸಿ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ತಮ್ಮ ಪ್ರವಚನಗಳ ಮೂಲಕ ನಾಡಿನೆಲ್ಲೆಡೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಇಂದು ಶರಣಿ ಎಂ.ಎ.ನೀಲಾಂಬಿಕಾರವರು ರಚಿಸಿರುವ ವಚನಕ್ಕೊಂದು ಕಥೆ ಎಂಬ ಪುಸ್ತಕವನ್ನು ನಾನು ಬಿಡುಗಡೆ ಮಾಡಿರುತ್ತೇನೆ. ಇಂತಹ ಮೌಲಿಕ ಕೃತಿಯನ್ನು ರಚಿಸಿದ್ದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ನಿರಂಜನ ಪ್ರಣವ ಸ್ವರೂಪಿ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು, ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.