ಮಾರ್ಚ್ ತಿಂಗಳಿಂದ ಸಪ್ತಪದಿ ಸಾಮೂಹಿಕ ವಿವಾಹ -ಡಾ. ಮಂಜುನಾಥಸ್ವಾಮಿ

ಮೈಸೂರು: ರಾಜ್ಯ ಸರ್ಕಾರದ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ನಡೆಸುವ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮುಜರಾಯಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಮಾರ್ಚ್ ತಿಂಗಳಿಂದ ಸಪ್ತಪದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಪ್ತಪದಿ ಕಾರ್ಯಕ್ರಮದ ಕುರಿತು ಪ್ರಮುಖ ದೇವಾಲಯಗಳ ಎದುರು ಮಾಹಿತಿ ಫಲಕಗಳನ್ನು ಅಳವಡಿಸಿದರೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಲಿದೆ. ಕಾರ್ಯಕ್ರಮ ನಿರಂತರವಾಗಿ ನಡೆಯಲಿರುವುದರಿಂದ ಸಾಮೂಹಿಕ ವಿವಾಹದ ಕುರಿತು ಹೆಚ್ಚು ಪ್ರಚಾರದ ಅಗತ್ಯವಿದೆ ಎಂದರು.
ಸುತ್ತೂರು ಕ್ಷೇತ್ರದಲ್ಲಿ ಪ್ರತೀ ವರ್ಷ ಸಾಮೂಹಿಕ ವಿವಾಹ ನಡೆಯಲಿದೆ ಎಂಬ ಮಾಹಿತಿ ಎಲ್ಲರಿಗೂ ಇರುತ್ತದೆ. ಸಪ್ತಪದಿ ಕಾರ್ಯಕ್ರಮ ಪ್ರತೀ ತಿಂಗಳು ನಡೆಯುವುದರಿಂದ ಈ ಬಗ್ಗೆ ದೇವಾಲಯಗಳ ಮುಂಭಾಗ ಹಾಗೂ ಡಿಸಿ, ಎಸಿ ಮತ್ತು ತಾಲೂಕು ಕಚೇರಿಗಳ ಮುಂದೆ ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಮಾರ್ಚ್‍ನಿಂದ ಜುಲೈವರೆಗೆ ಸಪ್ತಪದಿ ಸರಳ ಸಾಮೂಹಿಕ ವಿವಾಹ ನಡೆಸುವಂತೆ ಸರ್ಕಾರದಿಂದ ಸೂಚನೆ ಇದೆ. ಮಾ. 15ರಂದು ಚಾಮುಂಡಿ ಬೆಟ್ಟ, ಏ. 22ನಂಜನಗೂಡು, ಮೇ 13ರಂದು ಮುಡುಕುತೊರೆ, ಜೂ. 17 ಚಾಮುಂಡಿ ಬೆಟ್ಟ ಹಾಗೂ ಜು. 7ರಂದು ನಂಜನಗೂಡಿನಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಲಾಯಿತು.
ಸಪ್ತಪದಿ ಕಾರ್ಯಕ್ರಮದಡಿ ವಿವಾಹ ಮಾಡಿಕೊಳ್ಳುವವರು ಆಯಾ ತಾಲೂಕು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ವಿವಾಹದಲ್ಲಿ ಪಾಲ್ಗೊಳ್ಳುವ ಜೋಡಿಗಳು ತಮ್ಮ ಅಧಿಕೃತ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಸಪ್ತಪದಿ ಕಾರ್ಯಕ್ರಮದಡಿ ವಿವಾಹಕ್ಕೆ ಅರ್ಜಿ ಸಲ್ಲಿಸಬಹುದು ಎಂದರು.
ಸರಳ ಸಾಮೂಹಿಕ ವಿವಾಹದಲ್ಲಿ ಜೋಡಿಗಳೊಂದಿಗೆ ಆಗಮಿಸುವ ಸಂಬಂಧಿಕರು, ಹಿತೈಷಿಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಲು ತಿಳಿಸಿದರು.
ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ಸಿ.ಜಿ. ಕೃಷ್ಣ , ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್.ಯತಿರಾಜ್ ಸಂಪತ್ ಕುಮಾರನ್, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ವೆಂಕಟೇಶ್, ಜಿಲ್ಲಾ ನೋಂದಣಾಧಿಕಾರಿಗಳಾದ ವಿಜಯಲಕ್ಷ್ಮಿ ಇನಂದಾರ್ ಮತ್ತಿತರರು ಹಾಜರಿದ್ದರು.