ಸೈನಿಕ ಸ್ಮಾರಕ ಭವನ ನಿರ್ಮಾಣ ನಿರ್ಮಿತಿ ಕೇಂದ್ರದವರಿಗೆ ವಹಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರು ನಗರದಲ್ಲಿ ಸೈನಿಕ ಸ್ಮಾರಕ ಭವನ ನಿರ್ಮಾಣ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸೈನಿಕ ಸ್ಮಾರಕ ಭವನದ ನಿರ್ಮಾಣಕ್ಕಾಗಿ ಮೊದಲ ಕಂತಿನಲ್ಲಿ 50 ಲಕ್ಷ ರೂ.ವನ್ನು ಬಿಡುಗಡೆ ಮಾಡಲಾಗಿದ್ದು, ಸೈನಿಕ ಸ್ಮಾರಕ ಭವನದ ನಿರ್ಮಾಣದ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಆದರೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಮಾಣದ ಕೆಲಸವನ್ನು ವಿಳಂಬ ಮಾಡಿದ್ದರಿಂದ ಅನುದಾನವನ್ನು ವಾಪಸ್ಸು ಪಡೆದು, ನಿರ್ಮಾಣದ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರದವರು ವಹಿಸಿಕೊಳ್ಳುವಂತೆ ಸೂಚಿಸಿದರು.
ಸೈನಿಕರ ಸ್ಮಾರಕ ಭವನದ ನಿರ್ಮಾಣ ಕಾರ್ಯ ಕುರಿತಂತೆ ಪ್ರಗತಿಯನ್ನು ಗಮನಿಸಲು ಸಮಿತಿಯನ್ನು ರಚಿಸಿ, ನಿಗದಿತ ವೇಳೆ ಕಟ್ಟಡ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ನಿರ್ಮಿತಿ ಕೇಂದ್ರದ ಮಂಜುನಾಥ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.