ಮೈಸೂರು: ಐಟಿ ಉದ್ಯೋಗಿಯನ್ನು ದೋಚಿದ್ದ ಮೂವರು ಡಕಾಯಿತರನ್ನು ನಗರದ ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಬೆಲವತ್ತ ಗ್ರಾಮದ ಪೆಂಟಿಂಗ್ ಕೆಲಸ ಮಾಡುವ ಆರ್. ಪ್ರವೀಣ (23), ಬಿ.ಎಂ.ಶ್ರೀ ನಗರದ ಎಲೆಕ್ಟ್ರಿಕ್ ಕೆಲಸ ಮಾಡುವ ಎನ್. ಶಿವಕುಮಾರ್ (23) ಹಾಗೂ ಹುಣಸೂರಿನ ವಾಸಿ ಕಾರ್ ಡ್ರೈವರ್ ಕೆಲಸ ಮಾಡುವ ರಘು (25) ಬಂಧಿತ ಆರೋಪಿಗಳು.
ಮತ್ತೊಬ್ಬ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದು, ಆತನ ವಿರುದ್ದ ಕಾನೂನು ಕ್ರಮವನ್ನು ಪೊಲಿಸರು ಕೈಗೊಂಡಿದ್ದಾರೆ.
ಬಂಧಿತರಿಂದ ಪೊಲೀಸರು 42 ಸಾವಿರ ರೂ. ರೂ ನಗದು, 1 ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ 3 ಮೊಬೈಲ್ ಫೋನ್‍ಗಳು ಹಾಗೂ 1 ಸ್ಕೂಟರ್‍ನ್ನು ವಶಕ್ಕೆ ಪಡೆಡಿರುತ್ತಾರೆ.
ಘಟನೆ ವಿವರ: ಮೈಸೂರಿನ ಖಾಸಗಿ ಐಟಿ ಕಂಪನಿಯಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ ಇದೇ ಜ. 29ರಂದು ರಾತ್ರಿ ಮೈಸೂರಿನ ಕೆ.ಎಸ್.ಆರ್.ಟಿ.ಸಿ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಊಟಕ್ಕೆಂದು ಹೋಗಿ, ನಂತರ ಮೂತ್ರ ವಿಸರ್ಜನೆಗಾಗಿ ಬಸ್ ನಿಲ್ದಾಣದ ಎದುರಿನ ಪಾರ್ಕ್ ಕಡೆಗೆ ಹೋಗಿ ಅಲ್ಲಿ ಒಬ್ಬ ಮಂಗಳಮುಖಿ ಜೊತೆ ಹರಟೆ ಹೊಡೆದು ವಾಪಸ್ಸು ಮನೆಗೆ ಹೋಗಿದ್ದನು.
ಜ. 31ರಂದು ತನ್ನ ಕತ್ತಿನಲ್ಲಿದ್ದ ಚೈನ್‍ನ್ನು ನೋಡಿಕೊಂಡಾಗ ಅದು ಕಳೆದುಹೋಗಿದ್ದು, ಅದನ್ನು ಹುಡುಕಲು ಫೆ. 1ರಂದು ರಾತ್ರಿ ಅದೇ ಸ್ಥಳಕ್ಕೆ ತೆರಳಿ ಅಲ್ಲಿದ್ದ ಮಂಗಳಮುಖಿಯವರೊಂದಿಗೆ ಈ ಕುರಿತು ಕೇಳುತ್ತಿದ್ದನು.
ಅಲ್ಲಿಗೆ ನಾಲ್ಕು ಜನ ಅಪರಿಚಿತ ಯುವಕರುಗಳು ಬಂದು ನಿಮ್ಮ ಚೈನ್ ತೆಗೆದುಕೊಂಡು ಹೋಗಿರುವ ಮಂಗಳಮುಖಿ ಇರುವ ಜಾಗ ನಮಗೆ ಗೊತ್ತು, ನಮ್ಮೊಂದಿಗೆ ಬಾ ಎಂದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗೊಳ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಆತನ ತಲೆ, ಮುಖ ಮತ್ತು ಕೈ ಮೇಲೆ ಸೆರಾಮಿಕ್‍ಪೀಸ್ ಮತ್ತು ಖಾಲಿ ಬೀಯರ್ ಬಾಟೆಲ್‍ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಆತನ ಎ.ಟಿ.ಎಂ ಕಾರ್ಡಗಳನ್ನು ಕಿತ್ತುಕೊಂಡು ಅದರಲ್ಲಿ ಹಣವಿಲ್ಲದಿದ್ದರಿಂದ ಆತನಿಗೆ ಜೀವ ಬೆದರಿಕೆಯೊಡ್ಡಿ, ತನ್ನ ಹೆಂಡತಿಗೆ ಫೋನ್ ಮಾಡಿಸಿ ಅಪಘಾತವಾಗಿದೆ ಎಂದು ಸುಳ್ಳು ಹೇಳಿಸಿ 50 ಸಾವಿರ ರೂ ಹಣವನ್ನು ಆನ್‍ಲೈನ್ ಮೂಲಕ ಈತನ ಅಕೌಂಟ್‍ಗೆ ಹಾಕಿಸಿಕೊಂಡು, ನಂತರ ಅದನ್ನು ಎ.ಟಿ.ಎಂ ಗೆ ಹೋಗಿ ಡ್ರಾ ಮಾಡಿಕೊಂಡು, ಪೊಲೀಸರಿಗೆ ಹೇಳಿದರೆ ನಿನ್ನನ್ನು ಮುಗಿಸುತ್ತೇವೆಂದು ಬೆದರಿಕೆಯೊಡ್ಡಿ ಈತನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಆತನ ಬೈಕ್‍ನ್ನು ಕಿತ್ತುಕೊಂಡು ಹೋಗಿದ್ದರು.
ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡ ಮೇಟಗಳ್ಳಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಮೂರು ಮಂದಿ ನಟೋರಿಯಸ್ ಕ್ರಿಮಿನಲ್‍ಗಳಾಗಿದ್ದು, ಆ ಪೈಕಿ ಪ್ರವೀಣ ಹಾಗೂ ಶಿವಕುಮಾರ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಹಲ್ಲೆ, ದೊಂಬಿ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿರುತ್ತದೆ.
ಹಾಗೆಯೇ ಮತ್ತೊಬ್ಬ ಆರೋಪಿ ರಘು ಮೇಲೆ ಈ ಹಿಂದೆ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆಯ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ನಗರದ ಡಿ.ಸಿ.ಪಿ ಗೀತಪ್ರಸನ್ನ ಹಾಗೂ ಎ.ಸಿ.ಪಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮಲ್ಲೇಶ, ಪಿ.ಎಸ್.ಐಗಳಾದ ವಿಶ್ವನಾಥ್, ನಾಗರಾಜ್ ನಾಯ್ಕ್, ನರಸಿಂಹರಾಜ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಅನಿಲ್ ಶಂಕಪಾಲ್, ಲಿಂಗರಾಜಪ್ಪ, ಎಂ. ಕಾಂತ, ರಮೇಶ, ಸುರೇಶ್, ಜೀವನ್, ಹನುಮಂತ್ ಕಲ್ಲೇದ್ ಹಾಗೂ ಮೇಟಗಳ್ಳಿ ಠಾಣಾ ಸಿಬ್ಬಂದಿ ಎ.ಎಸ್.ಐ ಪೊನ್ನಪ್ಪ, ದಿವಾಕರ, ಕೃಷ್ಣ, ಪ್ರಶಾಂತ್ ಕುಮಾರ್. ಆಶಾ, ಶ್ರೀಶೈಲ ಹುಗ್ಗಿ, ಚೇತನ್, ಚಂದ್ರಕಾಂತ್ ತಳವಾರ್ ರವರುಗಳು ಹಾಗೂ ಟೆಕ್ನಿಕಲ್ ಸೆಲ್‍ನ ಪೊಲೀಸ್ ಇನ್ಸ್‍ಪೆಕ್ಟರ್ ಲೋಲಾಕ್ಷಿ, ಸಿಬ್ಬಂದಿಯವರಾದ ಗುರುದೇವ ಆರಾಧ್ಯ, ಕುಮಾರ್, ಮಂಜು ಹಾಗೂ ಶ್ಯಾಮ್ ರವರುಗಳು ಈ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿ ಆಗಿದ್ದಾರೆ.