ಮೈಸೂರಲ್ಲಿ ಜೋಡಿ ಕೊಲೆ ಮಾಡಿದ್ದ ನಾಲ್ವರ ಬಂಧನ

ಮೈಸೂರು: ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಕೆ. ಆರ್. ಠಾಣೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗದ ವಾಸಿ ದಿಲೀಪ್ (27), ಸ್ವಾಮಿ (36), ಗೌರಿಶಂಕರನಗರ 7ನೇ ಕ್ರಾಸ್ ನಿವಾಸಿ ಮಧು (23) ಹಾಗೂ ವಿದ್ಯಾರಣ್ಯಪುರಂ 4ನೇ ಮೇನ್, 32ನೇ ಕ್ರಾಸ್ ವಾಸಿ ರಘು (46) ಬಂಧಿತ ಆರೋಪಿಗಳು.
ಬಂಧಿತ ನಾಲ್ವರ ಪೈಕಿ ದೀಲಿಪ್ ಮತ್ತು ಮಧುನನ್ನು ಫೆ. 9ರಂದು ಜಯಪುರ ಬಸ್ ನಿಲ್ದಾಣದಲ್ಲಿ ಹಾಗೂ ಉಳಿದ ಆರೋಪಿಗಳಾದ ಸ್ವಾಮಿ ಹಾಗೂ ರಘುರನ್ನು ಫೆ. 10ರಂದು ನಗರದ ಕುಂಬಾರಕೊಪ್ಪಲು ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ.
ನಗರದ ಗೌರಿಶಂಕರ ನಗರ ಸರ್ವೆ ನಂ. 101ರ ನಿವೇಶನ ಸಂಖ್ಯೆ 2ರ ಜಾಗದ ವಿಚಾರದಲ್ಲಿ ಬಂಧಿತ ಆರೋಪಿಗಳು ಕಿರಣ್, ದೀಪಕ್ @ ಕಿಶನ್ ಮತ್ತು ಮಧುಸೂದನ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಕಿರಣ್ ಮತ್ತು ದೀಪಕ್ ಸಾವನ್ನಪ್ಪಿದ್ದಾರೆ.
ಮಧುಸೂಧನನಿಗೆ ಮಾರಣಾಂತಿಕ ಹಲ್ಲೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಮಧುಸೂಧನ ನೀಡಿದ ದೂರಿನ ಮೇರೆಗೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಈ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಮೈಸೂರು ನಗರದ ಡಿ.ಸಿ.ಪಿ. ಡಾ. ಎ.ಎನ್. ಪ್ರಕಾಶ್‍ಗೌಡ ರವರ ನೇತೃತ್ವದಲ್ಲಿ ಎ.ಸಿ.ಪಿ. ಪೂರ್ಣಚಂದ್ರ ತೇಜಸ್ವಿ ರವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್, ಪಿ.ಎಸ್.ಐ. ಕೃಷ್ಣ, ಸುನೀಲ್, ಎ.ಎಸ್.ಐ. ವಿನೋದ್, ಸಿಬ್ಬಂದಿಗಳಾದ ಶ್ರೀನಿವಾಸ ಪ್ರಸಾದ್, ರಮೇಶ್, ಸತೀಶ್ ಕುಮಾರ್, ಶರತ್ ಮತ್ತು ಮಧುರವರು ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವ ಆಗಿದ್ದಾರೆ.