ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ ವಶ

ಮೈಸೂರು: ನಗರದ ಉದಯಗಿರಿ ಠಾಣಾ ಪೊಲೀಸರು ಇಬ್ಬರು ದ್ವಿ ಚಕ್ರ ವಾಹನ ಕಲ್ಳರನ್ನು ಬಂಧಿಸಿ ಅವರಿಂದ 8 ಲಕ್ಷರೂ. ಬೆಲೆಯ 8 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕೆ.ಎನ್. ಪುರ 4 ನೇ ಕ್ರಾಸ್ ಅಬೂಬಕರ್ ಮಸೀದಿ ಹತ್ತಿರದ ವಾಸಿ ಮೊಹಮ್ಮದ್ ಶೋಹೇಬ್ (19) ಮತ್ತು
ಹರಿಶ್ಚಂದ್ರ ಘಾಟ್ 7ನೇ ಕ್ರಾಸ್ ನಿವಾಸಿ ಅರ್ಬಾಜ್ ಖಾನ್ (19) ಬಂಧಿತ ಆರೋಪಿಗಳು.
ಉದಯಗಿರಿ ಠಾಣಾ ವ್ಯಾಪ್ತಿಯ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸಂಬಂಧ ಉದಯಗಿರಿ ಪೊಲೀಸರು ಫೆ. 11ರಂದು ಉದಯಗಿರಿ ಅಲಿ ಪಾರ್ಕ್ ಬಳಿ ಗಸ್ತಿನಲ್ಲಿದ್ದಾಗ ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ಬಂಧಿತ ಇಬ್ಬರನ್ನು ಅನುಮಾನದ ಮೇರೆಗೆ ತಡೆದು ನಿಲ್ಲಿಸಿ ವಿಚಾರ ಮಾಡಿದಾಗ, ಇವರು ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ವೇಳೆಯಲ್ಲಿ ಮನೆಗಳ ಮುಂಭಾಗ ನಿಲ್ಲಿಸುತ್ತಿದ್ದ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.
ಬಂಧಿತರಿಂದ ಪೊಲೀಸರು ರೂ. 8 ಲಕ್ಷ ಮೌಲ್ಯದ 8 ದ್ವಿ ಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.
ಇವರಿಬ್ಬರ ಬಂಧನದಿಂದ ಉದಯಗಿರಿ ಠಾಣೆಯ-2, ಸರಸ್ವತಿಪುರಂ-1, ನಜûರ್‍ಬಾದ್-2, ನರಸಿಂಹರಾಜ-1, ದೇವರಾಜ-1, ಆಲನಹಳ್ಳಿ ಠಾಣೆಯ-1 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಮೈಸೂರು ನಗರ ಡಿ.ಸಿ.ಪಿ. ಗೀತಪ್ರಸನ್ನ ಮತ್ತು ದೇವರಾಜ ವಿಭಾಗದ ಎ.ಸಿ.ಪಿ. ಎಂ.ಎನ್ ಶಶಿಧರ್ ರವರ ಮಾರ್ಗದರ್ಶನದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪೂಣಚ್ಚ, ಪಿ.ಎಸ್.ಐ.ಗಳಾದ ಎಂ.ಜೈಕೀರ್ತಿ, ಮದನ್ ಕುಮಾರ್, ನಟರಾಜ್, ಮಾರುತಿ, ಎ.ಎಸ್.ಐ. ದಿವಾಕರ್ ಹಾಗೂ ಸಿಬ್ಬಂದಿಗಳಾದ ಎಂ.ಶಂಕರ್, ಸಿದ್ದಿಕ್ ಅಹಮದ್, ಮೋಹನ್‍ಕುಮಾರ್, ಕೃಷ್ಣ , ಶಿವರಾಜಪ್ಪ, ಮಾಲತಿ, ಭವ್ಯ ರವರುಗಳು ಈ ಇಬ್ಬರು ಕಳ್ಳರನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.