ಚಿಕ್ಕಬಳ್ಳಾಪುರ: ಸ್ವಸ್ಥ ಭಾರತಕ್ಕೆ ಮುನ್ನುಡಿ ಬರೆಯುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರ ಆತ್ಮನಿರ್ಭರ ಭಾರತ ಬಜೆಟ್ ಮಂಡಿಸಿದೆ. ಆದರೆ ಇಂಪೆÇೀರ್ಟೆಡ್ ನಾಯಕರಿರುವ ಕಾಂಗ್ರೆಸ್ ಪಕ್ಷಕ್ಕೆ ಆತ್ಮನಿರ್ಭರ ಭಾರತದ ಪರಿಕಲ್ಪನೆ ಅರ್ಥವೇ ಆಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೇಂದ್ರ ಬಜೆಟ್ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಜೆಟ್ ನ ಮಂತ್ರವಾಗಿದೆ. ಕೊರೊನಾದಿಂದಾಗಿ ತಾತ್ಕಾಲಿಕವಾಗಿ ಮಂದವಾಗಿದ್ದ ಆರ್ಥಿಕ ವ್ಯವಸ್ಥೆ ಮುಂದಿನ ಕೆಲವೇ ತಿಂಗಳಲ್ಲಿ ಸುಸ್ಥಿರಗೊಳ್ಳುವಂತೆ ಮಾಡುವ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದರು.
ಆರೋಗ್ಯ ಮತ್ತು ಯೋಗಕ್ಷೇಮ, ಮೂಲಸೌಕರ್ಯ, ಅಂತರ್ಗತ ಅಭಿವೃದ್ಧಿ, ಮಾನವ ಬಂಡವಾಳ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಆರು ಅಂಶಗಳಲ್ಲಿ ಬಜೆಟ್ ರೂಪಿಸಲಾಗಿದೆ. 34,83,236 ಕೋಟಿ ರೂ. ಗಾತ್ರದ ಬಜೆಟ್ ಆರ್ಥಿಕತೆಗೆ ಚಿಕಿತ್ಸೆ ನೀಡುವಂತಿದೆ ಎಂದು ಡಾ. ಸುಧಾಕರ್ ವಿವರಿಸಿದರು.
ಕೋವಿಡ್ ನಂತರದ ಕಾಲದಲ್ಲಿ ಆರ್ಥಿಕತೆಯನ್ನು ಹೇಗೆ ಪುನಶ್ಚೇತನಗೊಳಿಸಬೇಕು ಎಂಬ ಸ್ಪಷ್ಟ ನೀಲಿನಕ್ಷೆ, ಮುನ್ನೋಟ ಇಲ್ಲಿದೆ ಎಂದರು.
ಇದು ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಬಜೆಟ್. ಪ್ರಧಾನಿ ನರೇಂದ್ರ ಮೋದಿಯವರು ಕೃಷಿಯಲ್ಲಿ ಸುಧಾರಣೆ ತರಲು ಹೊಸ ಕಾನೂನು ತಂದಿದ್ದಾರೆ. ಆದ್ದರಿಂದ ರೈತ ಬಾಂಧವರು ಯಾವುದೇ ವದಂತಿ, ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಚಿವ ಸುಧಾಕರ್ ಮನವಿ ಮಾಡಿದರು.