ಮಾದರಿಯಾಗಿ ಹೆಬ್ಬಾಳು ಕೆರೆ ಅಭಿವೃದ್ಧಿ; ಸುಧಾಮೂರ್ತಿ ಅವರಿಗೆ ಪೌರಸನ್ಮಾನ -ಸಚಿವ ಎಸ್.ಟಿ .ಎಸ್.

ಮೈಸೂರು: ಇನ್ಫೋಸಿಸ್ ವತಿಯಿಂದ ಮೈಸೂರು ಹೆಬ್ಬಾಳು ಕೆರೆಯನ್ನು ಅತ್ಯುತ್ತಮವಾಗಿ, ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾ ನಾರಾಯಣಮೂರ್ತಿ ಅವರಿಗೆ ಪೌರ ಸನ್ಮಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನ ಹೊರವಲಯದಲ್ಲಿರುವ ಹೆಬ್ಬಾಳು ಕೆರೆಯನ್ನು ಶನಿವಾರ ವೀಕ್ಷಣೆ ಮಾಡಿದ ಸಚಿವರು, 2.2 ಕೀ.ಮೀ. ಸುತ್ತಳತೆಯುಳ್ಳ 54 ಎಕರೆ ವಿಸ್ತೀರ್ಣದ ವ್ಯಾಪ್ತಿಯೊಳಗೆ ಕೆರೆ ಇದ್ದು, ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸಿಆರ್ ಎಫ್ ವತಿಯಿಂದ ಸುಮಾರು 105 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ರೀತಿ ಸಿ ಎಸ್ ಆರ್ ಫಂಡ್ ಎಲ್ಲೆಲ್ಲಿ ಇದೆಯೋ ಅವುಗಳನ್ನು ಬಳಸಿಕೊಂಡು ಪಾರ್ಕ್, ಕೆರೆ ಸೇರಿದಂತೆ ಇನ್ನಿತರ ಕಡೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆರೆಗಳ ಒತ್ತುವರಿ ಸಂಬಂಧ ಸಚಿವ ಮಾಧುಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ಅವರು ಬಜೆಟ್ ಗಿಂತ ಮುಂಚಿತವಾಗಿ ಇಲ್ಲಿಗೆ ಬಂದು ವೀಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಅವರೇ ಆದೇಶ ನೀಡಲಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಚಂಡೀಗಡದಲ್ಲಿ ಇದೇ ಮಾದರಿಯ ಕೆರೆ ಇದ್ದು, ನೋಡಲು ಮನಮೋಹಕವಾಗಿದೆ. ಅಲ್ಲೂ ಸಹ ಸುಮಾರು 5-6 ಕಿ.ಮೀ. ವಿಸ್ತೀರ್ಣವುಳ್ಳ ಜಾಗದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಟ್ಟು ಮೂಲಸೌಕರ್ಯ ಒದಗಿಸಿ ನಿರ್ಮಿಸಲಾಗಿದೆ. ಅಂಥದ್ದೇ ಮಾದರಿಯ ಕೆರೆಯನ್ನು ನಾನು ಮೈಸೂರಿನಲ್ಲಿಯೇ ನೋಡುತ್ತಿದ್ದೇನೆ ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.
ಹೆಬ್ಬಾಳು ಕೆರೆಗೆ ತ್ಯಾಜ್ಯ ಹಾಗೂ ರಾಸಾಯನಿಕ ನೀರು ಸೇರುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗ ತಾನೇ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದೀರಾ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮುಡಾ ಆಯುಕ್ತ ನಟೇಶ್, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.