ಮೈಸೂರು: ನಗರದಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಗೊರಿಲ್ಲಾಕ್ಕೆ ನಿರ್ಮಾಣ ಮಾಡಲಾಗುತ್ತಿರುವ ಶೆಡ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ವೀಕ್ಷಿಸಿದರು.
ನಗರದ ಚಾರಾಜೇಂದ್ರ ಮೃಗಾಲಯಕ್ಕೆ ಸಚಿವರು ಭಾನುವಾರ ಭೇಟಿ ನೀಡಿ ಮೃಗಾಲಯದ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು.
ಜೂನ್ ನಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ವೆಚ್ಚದಲ್ಲಿ ಗೊರಿಲ್ಲಾಕ್ಕೆ ಶೆಡ್ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಸಚಿವರು, ಈ ಕಾಮಗಾರಿ ಅತ್ಯುತ್ತಮವಾಗಿ ಸಾಗುತ್ತಿದ್ದು, ಬರುವ ಜೂನ್ ಒಳಗೆ ಪೂರ್ಣಗೊಳ್ಳಬಹುದು ಎಂದು ತಿಳಿಸಿದರು.
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಅವರು ಅತ್ಯುತ್ತಮವಾದ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ನಾನು ನನ್ನ ಆಪ್ತರು, ಸಚಿವರು, ಕ್ಷೇತ್ರದ ಜನತೆಯಿಂದ 3.65 ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದೆ. ಇದೇ ವೇಳೆ ಪ್ರಾಣಿಗಳನ್ನು ಹಲವರು ದತ್ತು ಪಡೆದಿದ್ದರು. ಹೀಗಾಗಿ ಈ ಎಲ್ಲ ದಾನಿಗಳು ಇನ್ನೂ ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳುವಂತೆ ಪತ್ರ ಮುಖೇನ ಮನವಿ ಮಾಡುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕೋವಿಡ್ 19ರ ಸಂದರ್ಭದಲ್ಲಿ ಮೃಗಾಲಯಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಈಗ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿರುವುದರ ಜೊತೆಗೆ ಪ್ರವಾಸಿಗರ ಭೇಟಿ ಸಹ ಹೆಚ್ಚಳವಾಗುತ್ತಿದೆ. ಇದರಿಂದ ಮೃಗಾಲಯಕ್ಕೆ ಹಣದ ಹರಿವೂ ಬರತೊಡಗಿದೆ ಎಂದು ತಿಳಿಸಿದರು.
ಸಿಂಗಾಪುರದ ಒರಂಗೂಟ್ ಪ್ರಾಣಿಯ ವಾಸಸ್ಥಾನಕ್ಕಾಗಿ ಆರ್ ಬಿ ಐ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆಯನ್ನು ಸಚಿವರು ಈ ವೇಳೆ ವೀಕ್ಷಿಸಿದರು.
ಇದೇ ವೇಳೆ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳಿಗಾಗಿ ಕೊಡಮಾಡುವ ಆಹಾರ ಧಾನ್ಯಗಳ ಸಂಗ್ರಹಾಲಯಗಳಿಗೆ ಭೇಟಿ ನೀಡಿದ ಸಚಿವರು, ಅಧಿಕಾರಿಗಳಿಂದ ಸಂಗ್ರಹಣೆ, ವಿತರಣೆ ಪ್ರಮಾಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮಾಸಾಂಹಾರಗಳ ದರ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸರ್ಕಾರ ಏನೆಲ್ಲ ಕ್ರಮ ತೆಗೆದುಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಅರಣ್ಯ ಮಂತ್ರಿಗಳ ಜೊತೆ ಚರ್ಚೆ ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ತೀರ್ಮಾನ ಕೈಕೊಳ್ಳಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಅರಮನೆ ಹೆಣ್ಣಾನೆ ಸಂತಾನೋತ್ಪತ್ತಿಗೆ ಸರ್ಕಾರದ ಅನುಮತಿ: ಮೈಸೂರು ಮೃಗಾಲಯದಲ್ಲಿರುವ ಖಾಸಗಿ ಹೆಣ್ಣಾನೆ ಇದ್ದು, ಅದರ ಸಂತಾನೋತ್ಪತ್ತಿಗೆ ಯಾವ ರೀತಿಯಾಗಿ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಮೃಗಾಲಯದ ಅಧಿಕಾರಿಗಳ ಜೊತೆ ಸಚಿವರು ಚರ್ಚಿಸಿದರು.
ಸಚಿವ ಸೋಮಶೇಖರ್ ಅವರು ಮಸೂರು ಅರಮನೆಗೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಈ ಬಗ್ಗೆ ಮನವಿ ಮಾಡಿದ್ದರು.
ಮೃಗಾಲಯದ ಅಧ್ಯಕ್ಷರಾದ ಮಹದೇವಸ್ವಾಮಿ ಮತ್ತು ಸದಸ್ಯರು, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಮೃಗಾಲಯದ ಪ್ರಧಾನ ನಿರ್ದೇಶಕ ರವಿ, ಮೈಸೂರು ಹಾಲು ಒಕ್ಕೂಟಗಳ ನಿರ್ದೇಶಕ ಅಶೋಕ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಅನೇಕ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.