ಹಾಸನ: ಇತ್ತೀಚಿಗೆ ಆನೆ ದಾಳಿಯಿಂದ ಮೃತಪಟ್ಟ ಕೊಲ್ಲಹಳ್ಳಿ ಗ್ರಾಮದ ಆಸ್ತಿಕ್ ಭಟ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮತ್ತು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಸಚಿವ ಲಿಂಬಾವಳಿಯವರು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ನಾನು ಇಂದು ಆನೆ ತುಳಿತಕ್ಕೆ ಸಾವನ್ನಪ್ಪಿದ ಆಸ್ತಿಕ್ ಭಟ್ವರ ಮನೆಗೆ ಆಗಮಿಸಿ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದ್ದೇವೆ. ಮೃತ ಕುಟುಂಬಕ್ಕೆ ಈಗಾಗಲೇ 7.5 ಲಕ್ಷ ಪರಿಹಾರವನ್ನು ನೀಡಲಾಗಿದೆ. ಅಲ್ಲದೆ 5 ವರ್ಷದವರೆಗೆ ಮಾಸಿಕ 5000 ಪರಿಹಾರವನ್ನು ಸಹ ಕುಟುಂಬಕ್ಕೆ ನೀಡಲಾಗುತ್ತಿದೆ ಎಂದರು.
ಪಕ್ಷದ ಕಾರ್ಯಕರ್ತರಾಗಿದ್ದ ಆಸ್ತಿಕ್ ಭಟ್ ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ ಅವರು ಮೃತಪಟ್ಟ ಭಟ್ ಅವರ ಮಗಳಿಗೆ ಸರ್ಕಾರಿ ನೌಕರಿ ನೀಡುವಂತೆ ಕುಟುಂಬದವರು ಮನವಿ ಮಾಡಿದ್ದು ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಆನೆ ಹಾವಳಿಯಿಂದ ಮೃತಪಟ್ಟ ಕುಟುಂಬಕ್ಕೆ ಯಾವ ರಾಜ್ಯದಲ್ಲಿಯೂ ಇಷ್ಟು ಪ್ರಮಾಣದ ಪರಿಹಾರವನ್ನು ನೀಡಲಾಗುತ್ತಿಲ್ಲ ಅಲ್ಲದೆ ಮೃತ ಕುಟುಂಬಕ್ಕೆ ಮಾಸಿಕ 5000 5 ವರ್ಷದ ವರೆಗೆ ಪರಿಹಾರ ನೀಡಲಾಗುತ್ತಿದೆ ಎಂದರು.
ಸಕಲೇಶಪುರ ಆಲೂರು ಭಾಗದಲ್ಲಿ ಕಳೆದ ಕೆಲ ತಿಂಗಳಿಂದ ಆನೆ ತುಳಿತಕ್ಕೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಅರಿತು ಆನೆ ಹಾವಳಿ ಪ್ರದೇಶದಲ್ಲಿ ಗ್ರಾಮಸ್ಥರೊಂದಿಗೆ ಸಭೆ ಹಾಗೂ ಸಕಲೇಶಪುರ ಪಟ್ಟಣದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸಭೆಯನ್ನು ಕರೆಯಲಾಗಿದೆ ಇಲ್ಲಿ ಚರ್ಚೆಯ ಬಳಿಕ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು ಹಾಗೂ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಲಿಂಬಾವಳಿ ಭರವಸೆ ನೀಡಿದರು.