ಪ್ರಾಣಿಗಳ ರಕ್ಷಣೆಯೇ ನಮ್ಮ ಉದ್ದೇಶ -ಸಚಿವ ಪ್ರಭು ಚವ್ಹಾಣ್

ಮೈಸೂರು: ಪ್ರಾಣಿಗಳ ರಕ್ಷಣೆಯೇ ನಮ್ಮ ಉದ್ದೇಶ ಎಂದು ಕರ್ನಾಟಕ ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದರು.
ಸಚಿವ ಪ್ರಭು ಚವ್ಹಾನ್ ಅವರು ಬುಧವಾರ ನಗರದ ಧನ್ವಂತರಿ ರಸ್ತೆಯಲ್ಲಿ 2.78 ಕೋಟಿ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಪಶು ಆಸ್ಪತ್ರೆ/ಪಾಲಿಟೆಕ್ನಿಕ್ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕರ್ನಾಟಕ ಪ್ರಾಣಿ ಕಲ್ಯಾಣ ಯೋಜನೆಯಡಿ ಮನೆಬಾಗಿಲಿಗೆ ಪಶು ಚಿಕಿತ್ಸೆಗೆ ತೆರಳಲು ಪಶುಸಂಜೀವಿನಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಹೈನುಗಾರಿಕೆ ಮಾಡುವವರು ತಮ್ಮ ಪಶು, ಎಮ್ಮೆಗಳ ಆರೋಗ್ಯ ಪರಿಸ್ಥಿತಿಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ಇಂದು ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ 2ನೇ ಸ್ಥಾನಗಳಿಸಿರುವುದು ಸಂತಸದ ಸಂಗತಿ. ಇμÉ್ಟೂಂದು ಬೃಹತ್ ಮಟ್ಟದ ಹಾಲು ಉತ್ಪಾದನೆಗೆ ನಮ್ಮಲ್ಲಿ ಉತ್ತಮ ಗುಣಮಟ್ಟದ ಪಶು-ಎಮ್ಮೆ ತಳಿಗಳಿರುವುದೇ ಪ್ರಮುಖ ಕಾರಣ. ಇವುಗಳ ಆರೋಗ್ಯ ಪರಿಸ್ಥಿತಿ ಉತ್ತಮವಾಗಿದ್ದರೆ ಅವು ನೀಡುವ ಹಾಲು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಎಂದರು.
ಈ ಉದ್ಯಮವನ್ನು ಕೈಗೊಂಡಿರುವವರು ಮೊದಲು ತಮ್ಮ ಪಶುಗಳು ಮತ್ತು ಎಮ್ಮೆಗಳ ಆರೋಗ್ಯ ಪರಿಸ್ಥಿತಿಯ ಕಡೆ ಹೆಚ್ಚು ಗಮನ ಹರಿಸುವುದು ಬಹಳ ಅವಶ್ಯ ಎಂದು ಹೇಳಿದರು.
ಈ ನೂತನ ಕಟ್ಟಡದಲ್ಲಿ ವಿವಿಧ ರೀತಿಯ ಸೇವೆಗಳು ಲಭ್ಯವಿರುವುದರೊಂದಿಗೆ ತುರ್ತು ಸಂದರ್ಭದಲ್ಲಿ 1962 ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿ ಪಶು ವೈದ್ಯರನ್ನು ಸಂಪರ್ಕಿಸುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ನಗರದ ಪಶು ಪಾಲಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರಾಣಿಗಳಿಗೆ ರಕ್ಷಣೆ ಮತ್ತು ಪ್ರಾಣಿಗಳಿಗೆ ಚಿಕಿತ್ಸೆ ಆಗಬೇಕು ಎನ್ನುವ ದೃಷ್ಟಿಯಿಂದ ಆಸ್ಪತ್ರೆ ನಿರ್ಮಾಣಗೊಂಡಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಗುಣಮಟ್ಟದ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ, ನಗರ ಪಾಲಿಕೆ ಸದಸ್ಯೆ ಪ್ರಮೀಳಾಭರತ್.ಎಂ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಮಾದಪ್ಪ, ಜಿಲ್ಲಾ ಪಶು ಆಸ್ಪತ್ರೆಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಕೆ.ಪಿ. ರವಿಕುಮಾರ್, ಸಹಾಯಕ ನಿರ್ದೇಶಕ ಡಾ. ಎಸ್.ಪಿ. ಸುರೇಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.