ಹುಣಸೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ಅಂಗವಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶನಿವಾರ ಹುಣಸೂರು ತಾಲ್ಲೂಕು ತರೀಕಲ್ಲು ಗ್ರಾಮಕ್ಕೆ ಭೇಟಿ ನೀಡಿ, ಬೀದಿ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಅಹವಾಲು ಕೇಳಿದರು.
ಈ ಸಂದರ್ಭದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು, ವಸತಿ, ಸ್ಮಶಾನಕ್ಕೆ ಬೇಲಿ, ಸಮುದಾಯ ಭವನಕ್ಕೆ ಅನುದಾನ, ದೇವಸ್ಥಾನದ ಪುನರುಜ್ಜೀವನಗೊಳಿಸುವಿಕೆ ಮುಂತಾದ ವಿಷಯಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ತರೀಕಲ್ಲು ಗ್ರಾಮದ ರಂಗಯ್ಯನಕೊಪ್ಪಲು ಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾರಿಗೂ ಪೌತಿ ಖಾತೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ಮರಣ ಪ್ರಮಾಣ ಪತ್ರ ಮಾಡಿಸಿಕೊಂಡಿಲ್ಲದ ಕಾರಣ ಪೌತಿ ಆಗುತ್ತಿಲ್ಲ ಎಂದು ತಹಶೀಲ್ದಾರ್ ಮಾಹಿತಿ ನೀಡಿದಾಗ, ಒಂದು ದಿನ ವಿಶೇಷ ಕ್ಯಾಂಪ್ ಅನ್ನು ಈ ಹಾಡಿಯಲ್ಲಿ ಆಯೋಜಿಸಿ, ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ, ಮರಣ ಪ್ರಮಾಣ ಪತ್ರ ನೀಡಿ, ನಂತರ ಪೌತಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದರು.
ಕಿತ್ತೂರಿ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ, ಕಾಡು ಬಾದಾಮಿ ಗಿಡ ನೆಟ್ಟು ನೀರು ಎರೆದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಶಾಲಾ ಮಕ್ಕಳೊಂದಿಗೆ ಸಂವಾದ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಎ.ಎಂ. ಯೋಗೇಶ್, ಹುಣಸೂರು ಉಪವಿಭಾಗಾಧಿಕಾರಿ ವೀಣಾ, ತಹಶೀಲ್ದಾರ್ ಬಸವರಾಜು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ. ಶಿವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರ, ಧರ್ಮಾಪುತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮತ್ತಿತರ ಗಣ್ಯರು ಭಾಗವಹಿಸಿದರು.