ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪಾಲ್ಗೊಂಡು ಜನರ ಸಮಸ್ಯೆಗಳನ್ನು ಆಲಿಸಿದರು.
ಹೊಸಮಾಲಂಗಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.
ಶಾಲಾ ಆವರಣವನ್ನು ರಂಗೋಲಿ, ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಇಲಾಖೆಗಳು ಸರ್ಕಾರಿ ಕಾರ್ಯಕ್ರಮ ಯೋಜನೆಗಳ ಕುರಿತು ಉಪಯುಕ್ತ ಮಾಹಿತಿ ನೀಡುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು.
ಬಳಿಕ ಶಾಲಾ ಕೊಠಡಿಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಣೆ ಮಾಡಿದರು. ಮಕ್ಕಳಿಗೆ ವಿಜ್ಞಾನ ಕಲಿಸುವ ಜೊತೆಗೆ ಕಂದಾಚಾರ, ಮೌಢ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳ ಜೊತೆ ಕೆಲಕಾಲ ಸಂವಾದ ನಡೆಸಿದರು. ಶಾಲೆಗೆ ಸರಿಯಾಗಿ ಬರುತ್ತಿದ್ದೀರಾ? ಪಾಠಗಳು ಸರಿಯಾಗಿ ನಡೆಯುತ್ತಿವೆಯೇ ಎಂದು ಪ್ರಶ್ನಿಸಿದರು. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳು ಪಾಲನೆ ಮಾಡಬೇಕು ಎಂದು ಸಲಹೆ ಮಾಡಿದರು.
ನಂತರ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರಿಂದ ಕುಂದುಕೊರತೆ ಆಲಿಸಿದರು.
1982ರಲ್ಲಿ ಬೇರೆಯವರಿಂದ ಜಮೀನು ಖರೀದಿಸಲಾಗಿದೆ. ಆದರೆ ನನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿಲ್ಲ. ಕಳೆದ 2 ವರ್ಷಗಳಿಂದಲೂ ಖಾತೆ ಬದಲಾವಣೆಗೆ ಅಲೆಯುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಪುಟ್ಟಲಕ್ಷ್ಮಮ್ಮ ಎಂಬುವರು ಜಿಲ್ಲಾಧಿಕಾರಿ ಮುಂದೆ ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ, ದಾಖಲಾತಿ ಪರಿಶೀಲಿಸಿ ಒಂದು ವಾರದೊಳಗೆ ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಮಸಣಮ್ಮ ಎಂಬುವರು ಮಾತನಾಡಿ, ನನಗೆ ನಿವೇಶನ ಇದೆ. ಆದರೆ, ಮನೆ ಇಲ್ಲ. ಸರ್ಕಾರದಿಂದ ನನಗೆ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಸ್ಥಳದಲ್ಲಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನನಗೆ ಜಮೀನು ಇಲ್ಲ. ಆದ್ದರಿಂದ ಭೂ ಒಡೆತನ ಯೋಜನೆಯಡಿ ಜಮೀನು ಕೊಡಿಸಬೇಕು ಎಂದು ಗ್ರಾಮದ ಗಿರಿಜಮ್ಮ ಮನವಿ ಮಾಡಿದರು. ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಿ ಈ ಸಂಬಂಧ ಅರ್ಜಿ ಹಾಕಿ. ಜಮೀನು ಕೊಡಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇನೆ ಎಂದು ತಿಳಿಸಿದರು.
ಅಯ್ಯನೋರಹುಂಡಿ ಗ್ರಾಮದ ಮುಖ್ಯರಸ್ತೆಯನ್ನು ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ರಸ್ತೆ ಕಿರಿದಾಗಿದ್ದು ಓಡಾಡಲು ತೊಂದರೆಯಾಗುತ್ತಿದೆ. ಜೊತೆಗೆ ನಮ್ಮ ಗ್ರಾಮಕ್ಕೆ ಪ್ರತ್ಯೇಕ ನ್ಯಾಯ ಬೆಲೆ ಅಂಗಡಿ ನೀಡಬೇಕು ಎಂದು ಮನವಿ ಮಾಡಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ವಾಹನಗಳ ಮೂಲಕ ಗ್ರಾಮಕ್ಕೆ ತೆರಳಿ ಪಡಿತರ ವಿತರಿಸುವಂತೆ ಸೂಚಿಸಿದರು.
ಖಾತೆ ಮಾಡಿಕೊಡುವುದು, ಪಹಣಿ ತಿದ್ದುಪಡಿ, ವಸತಿ, ಒತ್ತವರಿ ತೆರವು, ಕೆರೆಗಳ ಸಂರಕ್ಷಣೆ, ಪಿಂಚಣಿ ಹೆಚ್ಚಳ, ವಿಧವಾ, ವೃದ್ಧಾಪ್ಯ ವೇತನ ಮಾಡಿಕೊಡುವುದು ಸೇರಿದಂತೆ ನಾನಾ ಮನವಿಗಳು ಗ್ರಾಮಸ್ಥರಿಂದ ಸಂಜೆಯವರೆಗೂ ಸಲ್ಲಿಕೆಯಾದವು.
ಸಂಜೆ ಶಾಲಾ ಆವರಣದಲ್ಲಿ ಶಾಸಕ ಎನ್.ಮಹೇಶ್ ಅವರು ಸಹ ಪಾಲ್ಗೊಂಡು ಸಮಸ್ಯೆಗಳನ್ನು ಆಲಿಸಿದರು.
ಫಲಾನುಭವಿಗಳಿಗೆ ಆರೋಗ್ಯ ಕರ್ನಾಟಕ ಕಾರ್ಡ್, ಪಿಂಚಣಿ ಮಂಜೂರಾತಿ ಪತ್ರ, ಭಾಗ್ಯ ಲಕ್ಷ್ಮಿ ಬಾಂಡ್, ವಿಶೇಷಚೇತನರಿಗೆ ವೀಲ್ ಚೇರ್, ಅಂಧರಿಗೆ ಸಾಧನ ಸಲಕರಣ, ಗುರುತಿನಚೀಟಿ, ಪೆÇೀಡಿ ಮುಕ್ತ ಅಭಿಯಾನದಡಿ ಆರ್.ಟಿ.ಸಿ. ನಕ್ಷೆ, ಇನ್ನಿತರ ಸವಲತ್ತುಗಳನ್ನು ಶಾಸಕ ಎನ್ ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮತ್ತಿತರ ಗಣ್ಯರು ವಿತರಿಸಿದರು.
ಇದೇ ವೇಳೆ ಶಾಲಾಮಕ್ಕಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ಮನ ಸೆಳೆದವು.
ಜಿಲ್ಲಾ ಪಂಚಾಯತ ಸದಸ್ಯ ಮುಳ್ಳೂರು ನಾಗರಾಜ್ (ಕಮಲ್), ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸುರೇಶ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾಶ್ರೀ, ಉಪಾಧ್ಯಕ್ಷ ಶಿವಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ತಹಸೀಲ್ದಾರ್ ಕುನಾಲ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್ ಕುಮಾರ್, ಡಿವೈಎಸ್ಪಿ ನಾಗರಾಜು ಇತರರಿದ್ದರು.