ಚಾಮರಾಜನಗರ: ಜಮೀನಿನ ಪೌತಿ ಖಾತೆಯಲ್ಲಿ ಹೆಸರು ಸೇರಿಸಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಖ್ಖಿಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಾಮರಾಜನಗರ ಜಿಲ್ಲೆ ಚಂದಕವಾಡಿ ಗ್ರಾಮ ಪಂಚಾಯಿತಿ ಗ್ರಾಮ ಲೆಖ್ಖಿಗ ಮಹೇಶ್ ಕುಮಾರ್ ಎಸಿಬಿ ಬಲೆಗೆ ಬಿದ್ದವರು.
ಜಿಲ್ಲೆಯ ಮೂಕನಪಾಳ್ಯದ ವ್ಯಕ್ತಿಯೊಬ್ಬರ ತಂದೆ ಹೆಸರಿನಲ್ಲಿದ್ದ ಜಮೀನಿನ ಪೌತಿ ಖಾತೆಯಲ್ಲಿ ಕುಟುಂಬದವರ ಹೆಸರು ಸೇರಿಸಲು ಮಹೇಶ್ ಕುಮಾರ್ 8 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದರು.
ದೂರುದಾರರು ಇದೇ ಫೆ. 18ರಂದು 2500 ರೂ. ರೂ ನೀಡಿದ್ದರು.
ನಂತರ ಉಳಿದ ಹಣ ನೀಡುವ ಮುನ್ನ ಎಸಿಬಿಗೆ ದೂರು ನೀಡಿದ್ದರು.
ಉಳಿದ 5500 ರೂ. ಹಣವನ್ನು ಸೋಮವಾರ ಮಹೇಶ್ ಕುಮಾರ್ ಕಚೇರಿಯಲ್ಲಿ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಮಹೇಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ದಕ್ಷಿಣ ವಲಯ ಮೈಸೂರು ಅಧೀಕ್ಷಕರಾದ ಅರುಣಾಂಗ್ಶು ಗಿರಿ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಎಸಿಬಿ ಪೊಲೀಸ್ ಉಪಾಧೀಕ್ಷಕ ಸದಾನಂದ ಎ. ತಿಪ್ಪಣ್ಣವರ್, ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್, ಎಲ್. ದೀಪಕ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.