ಚಿಕ್ಕಬಳ್ಳಾಪುರ: ಇಲ್ಲಿನ ಜನಪ್ರಿಯ ನಂದಿ ಗಿರಿಧಾಮವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಂದಿಬೆಟ್ಟಕ್ಕೆ ಗುರುವಾರ ಸಚಿವ ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಂದಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶ ಆಕರ್ಷಕವಾಗಿದೆ. ಇದಕ್ಕೆ ಐತಿಹಾಸಿಕ, ಧಾರ್ಮಿಕ ಪ್ರಾಮುಖ್ಯವಿದ್ದು, ವಿಶೇಷವಾದ ಸಸ್ಯ ಸಂಪತ್ತು ಇದೆ. ಇವೆಲ್ಲವನ್ನೂ ಗಮನಿಸಿ ಪ್ರವಾಸೋದ್ಯಮ ಕ್ಷೇತ್ರವಾಗಿಸಬಹುದು. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ 10 ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದರು.
ಕಳೆದ 15 ವರ್ಷಗಳಿಂದ ರೋಪ್ ವೇ ಬೇಕು ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಯೊಂದು ಇದನ್ನು ಮಾಡಲು ಮುಂದಾಗಿ ನಂತರ ಕಾರಣಾಂತರದಿಂದ ಯೋಜನೆ ಕೈ ಬಿಟ್ಟಿತ್ತು. ಈಗ ಆ ಕನಸು ನನಸಾಗಲಿದೆ. ಇಲ್ಲಿ ಪಾಕಿರ್ಂಗ್ ವ್ಯವಸ್ಥೆ ಮಾಡಲು 10 ಎಕರೆಗೂ ಹೆಚ್ಚು ಜಾಗವನ್ನು ಪಡೆಯಲು ಪ್ರಯತ್ನಿಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಯಬಹುದು ಎಂದರು.
ನಂದಿಬೆಟ್ಟವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪುಗೊಳಿಸಬೇಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಎಲ್ಲ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಇದರ ಜೊತೆಗೆ ಎಕೋ-ಟೂರಿಸಂ, ಸುತ್ತಮುತ್ತಲಿನ 5 ಬೆಟ್ಟಗಳಿಗೆ ಚಾರಣ ದಾರಿಗಳು, ಪುರಾತತ್ವ ಸ್ಮಾರಕಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳು ಸಂರಕ್ಷಣೆ, ಸುಂದರೀಕರಣ ಸೇರಿದಂತೆ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ. ಯಾವುದೇ ರೀತಿಯ ಪ್ಲಾಸ್ಟಿಕ್ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.