ವಿದ್ಯಾರ್ಥಿನಿಗೆ ಕಿರುಕುಳ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅಮಾನತು

ಮೈಸೂರು: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಸಮಾಜ ಕಲ್ಯಾಣ ಇಲಾಖೆಯ ಮೈಸೂರು ತಾಲೂಕು ಸಹಾಯಕ ನಿರ್ದೇಶಕಿಯನ್ನು ಅಮಾನತ್ತು ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಮೈಸೂರು ತಾಲೂಕು ಸಹಾಯಕ ನಿರ್ದೇಶಕಿ ಎಂ.ಕೆ.ಮೇಘಾ ಅಮಾನತ್ತುಗೊಂಡವರಾಗಿದ್ದಾರೆ.
ವಿದ್ಯಾರ್ಥಿ ನಿಲಯದ ನೀರಿನ ಸಮಸ್ಯೆ ಸರಿಪಡಿಸಲು ಆಗ್ರಹಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಎಂ.ಕೆ.ಮೇಘಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ.ರವಿಕುಮಾರ ಸುರಪುರ ಎಂ.ಕೆ.ಮೇಘಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಮಾನತು ಅವಧಿಯಲ್ಲಿ ಮೇಲಧಿಕಾರಿಗಳ ಅನುಮತಿ ಇಲ್ಲದೆ ಈ ಅಧಿಕಾರಿ ಕೇಂದ್ರ ಸ್ಥಾನವಾದ ಮೈಸೂರು ತಾಲೂಕನ್ನು ಬಿಟ್ಟು ಹೋಗುವಂತಿಲ್ಲ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೈಸೂರಿನ ಬೋಗಾದಿಯ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿನಿಯೋರ್ವರಿಗೆ ಬೆದರಿಕೆ ಹಾಗೂ ದೌರ್ಜನ್ಯ ನಡೆಸಿರುವ ಆರೋಪದಡಿ ಎಂ.ಕೆ.ಮೇಘಾ ವಿರುದ್ಧ ಸರಸ್ವತಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಸಂಬಂಧ ಹಿರಿಯ ಅಧಿಕಾರಿ ವಿಚಾರಣೆಗೂ ಸ್ಪಂದಿಸದೇ ಉದ್ಧಟತನ ತೋರಿರುವ ಆರೋಪದಡಿ ಜಯಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.
ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು, ಅಪರ ನಿರ್ದೇಶಕರ ಜಂಟಿ ತನಿಖಾ ವರದಿಯಲ್ಲಿ ಸಹಾಯಕ ನಿರ್ದೇಶಕಿ ಎಂ.ಕೆ.ಮೇಘಾ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಎಂ.ಕೆ.ಮೇಘಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.