ಮೈಸೂರು: ಪೇಜಾವರ ಶ್ರೀವಿಶ್ವ ಪ್ರಸನ್ನತೀರ್ಥ ಶ್ರೀಪಾದರ ಸಾನಿಧ್ಯದಲ್ಲಿ ಮೈಸೂರು ಜಿಲ್ಲೆಯ ಬ್ರಾಹ್ಮಣರ ವಿಪ್ರ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಇದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮೈಸೂರು ಜಿಲ್ಲೆಯಲ್ಲಿ ವಾಸವಿರುವ ಬ್ರಾಹ್ಮಣ ಸಮುದಾಯವನ್ನು ಸಂಘಟನಾತ್ಮಕವಾಗಿ ಒಗ್ಗೂಡಿಸುವ ನಿಟ್ಟಿನಲ್ಲಿ ವಿಪ್ರ ಸಮ್ಮಿಲನ ಕಾರ್ಯಕ್ರಮವನ್ನು ಪೇಜಾವರ ಶ್ರೀಗಳಾದ ಶ್ರೀವಿಶ್ವ ಪ್ರಸನ್ನತೀರ್ಥ ಶ್ರೀ ಪಾದರ ಸಾನಿಧ್ಯದಲ್ಲಿ ಫೆ. 28ರಂದು ಬೆಳಗ್ಗೆ 9.30ಕ್ಕೆ ನಗರದ ಸಿಂಧೂರ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದರು.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನತೀರ್ಥರು ಮತ್ತು ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತವಿಜಯಾನಂದ ಸ್ವಾಮೀಜಿಗಳು ಮತ್ತು ಪರಕಾಲ ಮಠದ ಮುಖ್ಯಸ್ಥರಾದ ವೆಂಕಟಾಚಾರ್ ರವರು ಭಾಗವಹಿಸಲಿದ್ದಾರೆಂದು ಡಿ ಟಿ ಪ್ರಕಾಶ್ ತಿಳಿಸಿದರು.
ಬ್ರಾಹ್ಮಣ ಜನಾಂಗದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ಸಮಸ್ಯೆಗಳಾಗಿರುವ ಶಿಕ್ಷಣ, ಉದ್ಯೋಗ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ವಿಪ್ರ ಸಮ್ಮಿಲನದ ಕಾರ್ಯಕ್ರಮದಲ್ಲಿ ಮೈಸೂರಿನ ಜನಪ್ರತಿನಿಧಿಗಳು, ವಿದ್ವಾಂಸರು ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು ಬ್ರಾಹ್ಮಣ ಸಮುದಾಯದ ಮುಖಂಡರು ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳ ಸಹಕಾರದಲ್ಲಿ ಬ್ರಾಹ್ಮಣ ಸಹಾಯ ಸಮಿತಿಯನ್ನ ಅಸ್ಥಿತ್ವಕ್ಕೆ ತರಲಾಗುತ್ತಿದೆ ಎಂದು ಅವರು ವಿವರಿಸಿದರು.
ಮೈಸೂರು ಜಿಲ್ಲೆಯಲ್ಲಿ ಬ್ರಾಹ್ಮಣರು 2 ಲಕ್ಷ ಮಂದಿಯಿದ್ದು ಈಗಾಗಲೇ ಕಳೆದ ಹತ್ತು ವರ್ಷಗಳಿಂದ ಬ್ರಾಹ್ಮಣ ಸಂಘ ಸಂಸ್ಥೆಗಳು ನಿರಂತರವಾಗಿ ಸಂಘಟನಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯದ ಯುವಸಮೂಹ, ಉದ್ಯಮಿಗಳು, ಅರ್ಚಕ ಪುರೋಹಿತರು ಸೇರಿದಂತೆ ಕಟ್ಟಕಡೆಯ ವ್ಯಕ್ತಿಯನ್ನು ಬಮುಖ್ಯವಾಹಿನಿಗೆ ತರಲು ಬ್ರಾಹ್ಮಣ ಸಮಾವೇಶಗಳು ಸೇರಿದಂತೆ ಶಂಕರ ಜಯಂತಿ ಆಚರಣೆ, ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ವತಿಯಿಂದ ಸ್ಥಾಪಿಸುವವರೆಗೂ ಯಶಸ್ವಿಯಾಗವಲ್ಲಿ ಬ್ರಾಹ್ಮಣ ಸಮುದಾಯದ ಸಂಘಟನೆ ಯಶಸ್ವಿಯಾಗಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀವೈಷ್ಣವ ನಗರದ ಸಮುದಾಯದ ಮುಖಂಡರಾದ ಸಿ ವಿ ಪಾರ್ಥಸಾರಥಿ, ಮಾಧ್ವ ಸಮುದಾಯದ ಮುಖಂಡರಾದ ಕೃಷ್ಣದಾಸ್ ಪುರಾಣಿಕ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಸುಚೀಂದ್ರ ಹಾಗೂ ಇನ್ನಿತರರು ಭಾಗವಹಿಸಿದರು.