ಚಾಮರಾಜನಗರ: ಅಭಿವೃದ್ಧಿ ಪಥದಲ್ಲಿರುವ ಗಡಿ ಜಿಲ್ಲೆ ಚಾಮರಾಜನಗರದ ಅಭಿವೃದ್ಧಿಗೆ 2021-22ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಯವರು ಹೆಚ್ಚಿನ ಆದ್ಯತೆ ನೀಡಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೊರೋನಾ ವಿಷಮ ಕಾಲಘಟ್ಟದ ಮಧ್ಯೆಯೂ ಗಡಿ ಜಿಲ್ಲೆಯ ಅಭಿವೃದ್ಧಿಗೆ ಆಯವ್ಯಯದಲ್ಲಿ ಪ್ರಾತಿನಿಧ್ಯ ನೀಡಿದ್ದು, ಮುಖ್ಯಮಂತ್ರಿಯವರು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ಸೇರ್ಪಡೆಗೊಳಿಸಿದ್ದಾರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಡಿ ಜಿಲ್ಲೆಯಲ್ಲಿ ಅರಿಶಿಣ ಬೆಳೆಗಾರರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅರಿಶಿಣ ಮಾರುಕಟ್ಟೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರದೇಶದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ವನ್ಯಜೀವಿ ಸಫಾರಿಯನ್ನೊಳಗೊಂಡAತೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು. ಆನೆ ಕಾರಿಡಾರಿನ ಭಾಗವಾಗಿರುವ ಚಾಮರಾಜನಗರ ಜಿಲ್ಲೆಯ ಬೂದಿಪಡಗದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಆನೆ ಶಿಬಿರ ಪ್ರಾರಂಭಿಸಲಾಗುವುದು. ನಿರ್ಮಾಣ ಕಾರ್ಮಿಕರು ವಸತಿ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಮನಗಂಡು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಸುಸಜ್ಜಿತವಾದ ತಾತ್ಕಾಲಿಕ ವಸತಿ ಗೃಹ ಸೌಲಭ್ಯವನ್ನು ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್-19ರ ಅವಧಿಯಲ್ಲಿ ಸೃಜಿಸಿದ ಮೌಲ್ಯಯುತವಾದ ವೈದ್ಯಕೀಯ ಸೌಕರ್ಯಗಳನ್ನು ವ್ಯರ್ಥವಾಗದಂತೆ ಸದ್ಬಳಕೆ ಮಾಡಲು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 25 ಹಾಸಿಗೆ ಸಾಮರ್ಥ್ಯವುಳ್ಳ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಲಾಗಿರುವುದಕ್ಕೆ ಪೂರಕವಾಗಿ ಗೋಹತ್ಯೆ ತಡೆಯಲು ಹಾಗೂ ಜಾನುವಾರುಗಳನ್ನು ಸಂರಕ್ಷಿಸಲು ಚಾಮರಾನಗರದಲ್ಲಿ ಗೋಶಾಲೆ ತೆರೆಯಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ವನ್ಯಜೀವಿಗಳ ಸುಗಮ ಮತ್ತು ಅಭಾದಿತ ಚಲನವಲನಕ್ಕೆ ಅವಶ್ಯವಿರುವ ಎರಡು ಅರಣ್ಯ ಪ್ರದೇಶಗಳ ಮಧ್ಯದ ಕಾರಿಡಾರ್ ಪ್ರದೇಶವನ್ನು ಸರ್ಕಾರವು ಖರೀದಿಸಲು ವಿವರ ಮಾರ್ಗಸೂಚಿಗಳನ್ನೊಳಗೊಂಡAತೆ ಹೊಸ ನೀತಿ ರೂಪಿಸಲಾಗುವುದು. ಕಾಡಂಚಿನಲ್ಲಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆಕಸ್ಮಿಕ ವನ್ಯಜೀವಿಗಳ ಹಾವಳಿಯಿಂದ ಉಂಟಾಗುತ್ತಿರುವ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ದಯಾತ್ಮಕ ಧನ ಪಾವತಿಸಲು ‘ಅರಣ್ಯ ಇ-ಪರಿಹಾರ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿಯವರು ಬಜೆಟ್ ನಲ್ಲಿ ಘೋಷಿಸಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ವಿಷಮ ಕಾಲಘಟ್ಟದ ಸಂದರ್ಭದಲ್ಲೂ ಮುಖ್ಯಮಂತ್ರಿಯವರು ಗಡಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತು ನೀಡುವ ಮೂಲಕ ಸಮತೋಲಿತ ಆಯವ್ಯಯ ಮಂಡಿಸಿದ್ದಾರೆAದು ಅವರು ಅಭಿಪ್ರಾಯಪಟ್ಟಿದ್ದಾರೆ.