ಮೈಸೂರು: ಖ್ಯಾತ ಕಾದಂಬರಿಕಾರರಾದ ಸಾಹಿತಿ ಎಸ್.ಎಲ್.ಭೈರಪ್ಪನವರ ಪರ್ವ ನಾಟಕ ಪ್ರದರ್ಶನ ಮಾ. 12ರಿಂದ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.
ನಗರದಲ್ಲಿನ ರಂಗಾಯಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅಡ್ಡಂಡ ಸಿ ಕಾರ್ಯಪ್ಪ ಅವರು ಪರ್ವ ನಾಟಕ ಪ್ರದರ್ಶನ ಕುರಿತು ಮಾಹಿತಿ ನೀಡಿದರು.
ಇದೇ ಮಾ. 12, 13, 14ರಂದು 3 ದಿನಗಳ ಕಾಲ ಪರ್ವ ನಾಟಕವು ನಗರದ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಮಾ. 12ರಂದು ಬೆಳಗ್ಗೆ 10 ಗಂಟೆಗೆ ಪರ್ವ ನಾಟಕ ಪ್ರದರ್ಶನಕ್ಕೆ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.
ಆಧುನಿಕ ಭಾರತ ರಂಗಭೂಮಿಯಲ್ಲಿ ವಿಶಿಷ್ಠ ಪ್ರಯೋಗಗಳ ಹಲವು ದಾಖಲೆಗಳನ್ನು ನಿರ್ಮಿಸಿದ ಮೈಸೂರು ರಂಗಾಯಣದ ನೂತನ ಮಹತ್ವಾಕಾಂಕ್ಷಿ ಯೋಜನೆ ಪದ್ಮಶ್ರೀ ಡಾ.ಎಸ್ ಎಲ್.ಭೈರಪ್ಪನವರ ಮೇರುಕೃತಿ ಪರ್ವ ಮಹಾಕಾದಂಬರಿಯನ್ನು ರಂಗಪಠ್ಯವಾಗಿ ರೂಪಿಸಿ ಏಳು ಗಂಟೆ ಮೂವತ್ತು ನಿಮಿಷಗಳ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಡಾ.ಎಸ್.ಎಲ್.ಭೈರಪ್ಪ ರಚಿತ ಕಾದಂಬರಿ ‘ಪರ್ವ’ ನಾಟಕವಾಗಿ ಮೂಡಿ ಬಂದಿದೆ ಎಂದವರು ಹೇಳಿದರು.
ಈ ಮಹಾರಂಗ ಪ್ರಸ್ತುತಿಗೆ ಅನೇಕ ಖ್ಯಾತನಾಮರು ಜೊತೆಗೂಡಿದ್ದಾರೆ. ವಿಶೇಷವಾಗಿ ವಸ್ತ್ರ ವಿನ್ಯಾಸವನ್ನು ಅಂತರರಾಷ್ಟ್ರೀಯ ಖ್ಯಾತಿಯ ವಸ್ತ್ರ ವಿನ್ಯಾಸಕ ಪ್ರಸಾದ್ ಬಿದ್ದಪ್ಪ ಮಾಡಿದ್ದು, ವಸ್ತ್ರ ಪರಿಕರ ಮತ್ತು ಆಭರಣಗಳ ಸಿದ್ಧತೆಯನ್ನು ಖ್ಯಾತ ವಿನ್ಯಾಸಕಿ ಸಂಕೀರ್ತಿ ಐಪಂಜಿಗುಳಿ ಇವರು ಮಾಡಿದ್ದಾರೆಂದರು. ರಂಗಸಜ್ಜಿಕೆ ಮತ್ತು ವಿನ್ಯಾಸವನ್ನು ರಂಗಾಯಣದ ಹೆಸರಾಂತ ವಿನ್ಯಾಸಕಾರರಾದ ಹೆಚ್.ಕೆ.ದ್ವಾರಕಾನಾಥ್ ಅವರು ರೂಪಿಸಿದ್ದಾರೆ. ಸಂಗೀತ ನಿರ್ದೇಶನವನ್ನು ಖ್ಯಾತ ರಂಗಸಂಗೀತಕಾರ ರವಿಮೂರುರು ಮಾಡಿದ್ದಾರೆ. ಈ ನಾಟಕದ ರಂಗ ವ್ಯವಸ್ಥಾಪಕರಾಗಿ ರಂಗಾಯಣದ ಹಿರಿಯ ಕಲಾವಿದೆ ಪ್ರಮೀಳಾ ಬೆಂಗ್ರೆ ಅವರು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಈ ಮಹಾ ರಂಗಪ್ರಸ್ತುತಿಯ ವಿಶೇಷ ಪ್ರದರ್ಶನ ಕರ್ನಾಟಕ ಕಲಾಮಂದಿರದಲ್ಲಿ ಮಾ. 12, 13, 14ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.
ಈ ವಿಶೇಷ ಪ್ರದರ್ಶನಗಳಲ್ಲಿ ಹತ್ತು ನಿಮಿಷಗಳ 3 ಚಹಾ ವಿರಾಮಗಳು ಮತ್ತು 30 ನಿಮಿಷದ ಊಟದ ವಿರಾಮ ಒಳಗೊಂಡು ಸಂಜೆ 6.30ಕ್ಕೆ ನಾಟಕ ಮುಗಿಯಲಿದೆ. ಚಹಾ ವಿರಾಮ ಮತ್ತು ಊಟದ ವಿರಾಮಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿದ್ದು ರಂಗಮಂದಿರದ ಎರಡು ಕಡೆಯ ಹೊರ ಆವರಣದಲ್ಲಿ ಚಹಾ ಮತ್ತು ಊಟದ ಕೌಂಟರ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಈಗಾಗಲೇ ಮೂರು ದಿನಗಳ ವಿಶೆಷ ಪ್ರದರ್ಶನದ ಶೇ. 70 ರಷ್ಟು ಟೀಕೇಟ್ ಗಳನ್ನು ರಂಗಾಸಕ್ತರು ಖರೀದಿಸಿದ್ದು ಇದಕ್ಕಾಗಿ ರಂಗಾಯಣದ ಕಛೇರಿಯಲ್ಲಿ ತೆರೆದಿರುವ ಪರ್ವ ಮಾಹಿತಿ ಕೇಂದ್ರದಲ್ಲಿ ಖುದ್ದಾಗಿ ಮತ್ತು ಆನ್ ಲೈನ್ ಮೂಲಕವೂ ಟಿಕೇಟ್ ಗಳನ್ನು ಪಡೆಯಬಹುದಾಗಿದೆ ಎಂದರು.
ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.