ಮೈಸೂರು: ಮೈಸೂರಿನಲ್ಲಿ ಅಗತ್ಯ ಬಿದ್ದರೆ ಮಿನಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಎಚ್ಚರಿಕೆ ನೀಡಿದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳು ಮಾತನಾಡಿದರು.
ರಾಜ್ಯಕ್ಕೆ ಎರಡನೆ ಅಲೆ ಬಂದಿದೆ ಅಂತ ಆರೋಗ್ಯ ಸಚಿವರೇ ಘೋಷಣೆ ಮಾಡಿದ್ದಾರೆ. ಸರ್ಕಾರ ಯಾವ ಗೈಡ್ಲೈನ್ ಹೊರಡಿಸಿದೆ ಅದರ ಪ್ರಕಾರ ನಾವು ಕ್ರಮ ಕೈಗೊಂಡಿದ್ದೇವೆ ಎಂದರು.
ಮೈಸೂರು ಅರಮನೆಯಲ್ಲಿ ಮತ್ತೆ ಆರ್ ಟಿಪಿಸಿಆರ್ ಹಾಗೂ ಆ್ಯಂಟಿಜೆನ್ ಟೆಸ್ಟ್ ಆರಂಭಿಸುತ್ತೇವೆ. ಬಾವಲಿ ಗಡಿಯಲ್ಲಿ ಪ್ರತಿಯೊಬ್ಬರಿಗೂ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯವಾಗಿದೆ. ತರಕಾರಿ ವಾಹನ ಅಲ್ಲ ಯಾವ ವಾಹನಕ್ಕೂ ಟೆಸ್ಟ್ ಇಲ್ಲದೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಮತ್ತೆ ಶಾಲೆ, ಕಾಲೇಜುಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಿ ಸೋಂಕು ಹೆಚ್ಚಿದೆ ಅಲ್ಲಿ ಮಿನಿ ಲಾಕ್ ಡೌನ್ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
500 ಜನರಿಗಿಂತ ಹೆಚ್ಚಾಗಿ ಎಲ್ಲಿಯೂ ಜನ ಸೇರಬಾರದು. ಇದೆ ಕಾರಣಕ್ಕೆ ನಾವು ಎಲ್ಲ ಜಾತ್ರೆ, ಉತ್ಸವಗಳನ್ನು ರದ್ದು ಮಾಡಿದ್ದೇವೆ ಎಂದರು.
ಜನರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಲಕ್ಷಾಂತರ ಜನ ಬಂದು ಜಾತ್ರೆ ಮಾಡೋಕೆ ಆಗಲ್ಲ. ಅದರ ನಂತರದ ಪರಿಸ್ಥಿತಿ ನಿಭಾಯಿಸಲು ನಮಗೂ ಕಷ್ಟ ಆಗುತ್ತೆ. ಜಾತ್ರೆಯನ್ನು ಮುಂದಿನ ವರ್ಷ ಮಾಡಬಹುದು. ಆದರೆ ಜೀವನ ಉಳಿಸಿಕೊಳ್ಳುವುದು ಮುಖ್ಯ ಆಗಿದೆ ಎಂದು ಡಿಸಿ ಹೇಳಿದರು.