ಏಪ್ರಿಲ್ ನಲ್ಲಿ ಎಲ್ಲಾ ದಿನ ಕೊವಿಡ್ ಲಸಿಕೆ ಕೊಡಬೇಕು -ರೋಹಿಣಿ ಸಿಂಧೂರಿ

ಮೈಸೂರು: ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಗುರುತಿಸಿ ಈ ಏಪ್ರಿಲ್ ತಿಂಗಳಿನ ಎಲ್ಲಾ ದಿನಗಳಲ್ಲಿಯೂ ಕಡ್ಡಾಯವಾಗಿ ಕೊವಿಡ್ ಲಸಿಕೆಯನ್ನ ಕೊಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊವಿಡ್ ಲಸಿಕೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಕೊವಿಡ್ ಲಸಿಕೆಯನ್ನು ನೀಡುವ ಸಲುವಾಗಿ ಈ ತಿಂಗಳಿನ ಎಲ್ಲಾ ಸರ್ಕಾರಿ ರಜೆಗಳನ್ನು ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 8 ಲಕ್ಷ ಜನರಿಗೆ ಲಸಿಕೆಯನ್ನು ನೀಡಬೇಕಾಗಿದ್ದು, ಇದಕ್ಕಾಗಿ ಜನರನ್ನು ಗುರುತಿಸಬೇಕಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಪ್ರತಿದಿನ 10 ಸಾವಿರ ಲಸಿಕೆಯನ್ನು ನೀಡಲಾಗುತ್ತಿದ್ದು, ಇನ್ನು ಮುಂದೆ ಪ್ರತಿದಿನ 20ಸಾವಿರ ಜನರಿಗೆ ಲಸಿಕೆ ನೀಡಬೇಕು ಎಂದರು.
ಮೈಸೂರು ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೊಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ವ್ಯಾಕ್ಸಿನೇಷನ್ ಕೂಡ ಸರಿಯಾಗಿ ನಡೆಯಬೇಕಿದೆ. ಪ್ರಾರಂಭದಲ್ಲಿ ಹೆಚ್ಚಿನ ಜನರು ಬಂದ ಕಾರಣ ಲಸಿಕೆ ಸಾಕಾಗಲಿಲ್ಲ ಎಂಬ ಕಾರಣಕ್ಕೆ ನಿಂತು ಹೋಗಿತ್ತು. ಆದರೆ ಈಗ 20 ಲಕ್ಷ ಲಸಿಕೆಗಳು ಲಭ್ಯವಿದ್ದು, ಯಾವುದೇ ಲಸಿಕೆಯ ಕೊರತೆ ಇಲ್ಲವಾಗಿರುವ ಕಾರಣ ಈ ಒಂದು ತಿಂಗಳು ಮಾತ್ರ ಕೊವಿಡ್ ಪರೀಕ್ಷೆ ಮಾಡಿ ಲಸಿಕೆ ನೀಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಪ್ರತಿಯೊಂದು ಹಳ್ಳಿಯಲ್ಲಿ ತಹಶಿಲ್ದಾರ್ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಸಭೆ ನಡೆಸಿ, ಸಾರ್ವಜನಿಕರು ಸೇರುವ ಸ್ಥಳಗಳಾದ ಬಸ್ ನಿಲ್ದಾಣಗಳಲ್ಲಿನ ಜನರನ್ನು ಮಾತ್ರ ಗುರುತಿಸುವುದಲ್ಲದೆ ಲಸಿಕೆ ಪಡೆಯಲು ಅರ್ಹರಿರುವವರನ್ನೂ ಕೂಡ ಗುರುತಿಸಿ ತಾಲ್ಲೂಕಿನ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ನೀಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರ್ ನಾಥ್, ಮೈಸೂರು ತಹಶಿಲ್ದಾರ್ ರಕ್ಷಿತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ಪದ್ಮ ಸೇರಿದಂತೆ ಇತರರು ಹಾಜರಿದ್ದರು.