ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರರಿಂದ ಕೋವಿಡ್ ಜಾಗೃತಿ

ಚಾಮರಾಜನಗರ: ಕೋವಿಡ್-19 ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳಿಗೆ ಮುಂದಾಗಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಪ್ರವಾಸಿಗರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಪ್ರವಾಸಿ ಮಿತ್ರರನ್ನು ಸಜ್ಜುಗೊಳಿಸಿದೆ.
ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಈಗಾಗಲೇ ಪ್ರವಾಸಿಗರಿಗೆ ಮಾಹಿತಿ ನೀಡುವ ಸಲುವಾಗಿ ನಿಯೋಜನೆಗೊಂಡಿರುವ ಪ್ರವಾಸಿ ಮಿತ್ರರನ್ನು ಬಳಸಿಕೊಂಡು ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕೋವಿಡ್ ಶಿμÁ್ಟಚಾರ ಪಾಲನೆ ಬಗ್ಗೆ ಜಾಗೃತಿ ಉಂಟುಮಾಡುವ ವಿನೂತನ ಕ್ರಮಕ್ಕೆ ಜಿಲ್ಲಾಡಳಿತ ಮಾದರಿಯಾಗಿದೆ.
ಹೆಚ್ಚು ಜನರು ಭೇಟಿ ನೀಡುವ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣಗಳು ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರಿಗೆ ಕ್ಷೇತ್ರ ಕುರಿತು ಸಮಗ್ರ ಪರಿಚಯ ಮಾಡಿಸುವ ಪ್ರವಾಸಿ ಮಿತ್ರರಿಂದಲೇ ಪ್ರವಾಸಿಗರಿಗೆ ಕೋವಿಡ್-19 ಬಗ್ಗೆ ತಿಳಿವಳಿಕೆ, ಜಾಗೃತಿ ಮೂಡಿಸುವ ಕಾರ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಭರಚುಕ್ಕಿ ಜಲಪಾತ, ಮಧ್ಯರಂಗನಾಥಸ್ವಾಮಿ ದೇವಸ್ಥಾನ, ದರ್ಗಾ, ಕೆ.ಗುಡಿ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ, ಬಿಳಿಗಿರಿರಂಗನ ಬೆಟ್ಟ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಚಾಮರಾಜೇಶ್ವರ ದೇವಾಲಯದಂತಹ ಸ್ಥಳಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಕೋವಿಡ್ ನಿಯಂತ್ರಣಕ್ಕೆ ಪಾಲನೆ ಮಾಡಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರವಾಸಿ ಮಿತ್ರರು ಅರಿವು ಉಂಟು ಮಾಡಲಿದ್ದಾರೆ.
ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಲ್ಲಿಯೂ ಸಹ ಕೋವಿಡ್ ಹರಡುವಿಕೆಯನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಜರ್, ಸೋಪು ಬಳಸಬೇಕು ಎಂಬ ಬಗ್ಗೆ ವ್ಯಾಪಕವಾಗಿ ಪ್ರವಾಸಿ ಮಿತ್ರರು ಪ್ರವಾಸಿಗರಿಗೆ ಜಾಗೃತಿ ಮೂಡಿಸಲಿದ್ದಾರೆ.
ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಹಲವಾರು ವಿಶ್ವ ವಿಖ್ಯಾತ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಅಲ್ಲದೇ ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಪ್ರಸಿದ್ದ ಯಾತ್ರಾ ಕ್ಷೇತ್ರಗಳು ಇಲ್ಲಿವೆ. ಪ್ರಸ್ತುತ ಇರುವ ಕೋವಿಡ್ ಸಂದರ್ಭದಲ್ಲಿ ಪ್ರವಾಸಿಗರು ಹಾಗೂ ಭಕ್ತಾಧಿಗಳ ಆರೋಗ್ಯ ರಕ್ಷಣೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ಹರಡುವಿಕೆ ತಡೆಯಲು ಪಾಲಿಸಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರವಾಸಿಗರಿಗೆ ಹಾಗೂ ಭಕ್ತಾಧಿಗಳಿಗೆ ಮಾಹಿತಿ ಮಾರ್ಗದರ್ಶನ ಮಾಡಲು 20 ಪ್ರವಾಸಿ ಮಿತ್ರರು ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.