ಮೈಸೂರು: ಕೋವಿಡ್ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೋವಿಡ್ ಚಿಕಿತ್ಸಾ ಪೆÇ್ರೀಟೋಕಾಲ್ ಪಾಲಿಸದೇ ಸಾವು ಸಂಭವಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ ಫೆಬ್ರವರಿಯಲ್ಲಿ 4 ಸಾವು, ಮಾರ್ಚ್‍ನಲ್ಲಿ 25 ಸಾವು ಸಂಭವಿಸಿತ್ತು. ಆದರೆ ಏಪ್ರಿಲ್‍ನಲ್ಲಿ ಈವರೆಗೆ 30 ಸಾವು ಸಂಭವಿಸಿದ್ದು ಆತಂಕ ಮೂಡಿಸಿದೆ. ಒಂದೇ ದಿನಕ್ಕೆ ಸುಮಾರು 10 ಸಾವು ಸಂಭವಿಸಿದೆ. ಸುಯೋಗ್ ಆಸ್ಪತ್ರೆ, ಭಾನವಿ ಹಾಗೂ ಡಿ.ಆರ್.ಎಂ. ಮುಂತಾದ ಖಾಸಗಿ ಆಸ್ಪತ್ರೆಗಳು ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಆ ಸ್ಥಿತಿಯಲ್ಲಿ ಬೇರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸ್ಥಳಾಂತರದಿಂದ ಹೆಚ್ಚಿನ ಸಾವು ಸಂಭವಿಸಿದೆ ಎಂದು ಡೆತ್ ಆಡಿಟ್‍ನಲ್ಲಿ ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕ್ರಿಟಿಕಲ್ ಸಂದರ್ಭದ ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯ ಇಲ್ಲದಿದ್ದರೆ ದಯಮಾಡಿ ರೋಗಿಗಳನ್ನು ಸೇರಿಸಿಕೊಳ್ಳಬೇಡಿ. ಆದಾಗ್ಯೂ ಸೇರಿಸಿಕೊಂಡಿದ್ದರೆ ಪರಿಸ್ಥಿತಿ ಗಂಭೀರವಾಗುವ ಮುನ್ನವೇ ಇತರೆ ಖಾಸಗಿ ಆಸ್ಪತ್ರೆಗೆ ಅಥವಾ ಕೆ.ಆರ್. ಆಸ್ಪತ್ರೆಗೆ ರೆಫರ್ ಮಾಡಿ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಬೇಡಿ ಎಂದು ಹೇಳಿದರು.
ರೋಗಿಯನ್ನು ಬೇರೆ ಆಸ್ಪತ್ರೆಗೆ ಕಳುಹಿಸುವಾಗ ಹಿಂದಿನ ಚಿಕಿತ್ಸಾ ವಿಧಾನ, ಪರೀಕ್ಷಾ ಇತಿಹಾಸ ಹಾಗೂ ಸೂಕ್ತ ಶಿಫಾರಸ್ಸು(ರೆಫರಲ್)ನೊಂದಿಗೆ ಕಳುಹಿಸಬೇಕು. ಬೇರೆ ಆಸ್ಪತ್ರೆಯಿಂದ ಬಂದ ಗಂಭೀರ ಸ್ಥಿತಿಯ ರೋಗಿಯನ್ನು ಸೇರಿಸಿಕೊಂಡ ಆಸ್ಪತ್ರೆಗೆ ಯಾವ ಚಿಕಿತ್ಸೆ ನೀಡಬೇಕು ಎಂದು ನಿರ್ಧಾರ ಕೈಗೊಳ್ಳಲು ಸಮಯ ಬೇಕಾಗುತ್ತದೆ. ಆ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಈ ರೀತಿ ಆಗಬಾರದು ಎಂದರು.
ಸಾವು ಸಂಭವಿಸಿದರೆ ಅದೇ ದಿನವೇ ಮಾಹಿತಿ ನೀಡಬೇಕು. ಸಾವು ಸಂಭವಿಸಿದ 48 ಗಂಟೆಯ ಒಳಗೆ ಡೆತ್ ಆಡಿಟ್ ಆಗಬೇಕು. ಆಗ ಮಾತ್ರ ವಾಸ್ತವ ಅಂಶಗಳ ಬಗ್ಗೆ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಾವು ಕೋವಿಡ್ ನಿಂದಾಗಿರಬಹುದು ಅಥವಾ ಕೊಮಾರ್ಬಿಡಿಟೀಸ್‍ನಿಂದ ಆಗಿರಬಹುದು. ಸರಿಯಾದ ಮಾಹಿತಿ ನೀಡಿದರೆ ಡೆತ್ ಆಡಿಟ್‍ನಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ. ರೋಗಿಯನ್ನು ಸೇರಿಸಿಕೊಳ್ಳುವಾಗ ಕೋವಿಡ್ ಲಸಿಕೆ ಪಡೆದಿದ್ದರೆ ಎಂಬುದನ್ನು ಸಹ ದಾಖಲಿಸಿಕೊಳ್ಳಬೇಕು ಎಂದು ಹೇಳಿದರು.
ರೋಗಿಯು ಗಂಭೀರ ಸ್ಥಿತಿಯಲ್ಲಿರುವ ಪರಿಸ್ಥಿತಿಯಲ್ಲಿ ಸುಯೋಗ್ ಆಸ್ಪತ್ರೆ ಸರಿಯಾದ ರೆಫರಲ್ ಇಲ್ಲದೆ ಬೇರೆ ಆಸ್ಪತ್ರೆಗೆ ಕಳುಹಿಸಿರುವುದನ್ನು ಗಮನಿಸಿದ್ದೇವೆ. ಈ ಸಭೆಗೂ ಸಹ ಸುಯೋಗ್ ಆಸ್ಪತ್ರೆ ಪ್ರತಿನಿಧಿಗಳು ಬಂದಿಲ್ಲ. ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ. ಉದಯ್‍ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ. ಅಮರನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಪ್ರಸಾದ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಿರಾಜ್ ಅಹ್ಮದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ. ರವಿ, ಆರ್.ಸಿ.ಹೆಚ್. ಹಾಗೂ ಕೋವಿಡ್ ಲಸಿಕೆ ನೋಡಲ್ ಅಧಿಕಾರಿ ಡಾ. ಎಲ್.ರವಿ, ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.