ಮೈಸೂರು: ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿ ಕೆಲಸದ ಸ್ಥಳದಲ್ಲೇ ಲಸಿಕಾ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.
ದೇಶಾದ್ಯಂತ ತೀವ್ರ ಗತಿಯಲ್ಲಿ ಏರುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಎಲ್ಲಾ ಅರ್ಹ ಉದ್ಯೋಗಿಗಳಿಗೆ ಲಸಿಕೆ ನೀಡುವುದನ್ನು ಖಚಿತಪಡಿಸಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು, ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿ 45 ವರ್ಷ ಹಾಗು ಅದಕ್ಕಿಂತ ಹೆಚ್ಚಿನ ವಯಸ್ಸಿನ ಉದ್ಯೋಗಿಗಳಿಗೆ ಮತ್ತು ಹೆಚ್ಚಿನ ಅಪಾಯದ ಅಡಿಯಲ್ಲಿ ಬರುವ ಅರ್ಹ ಮುಂಚೂಣಿ ಉದ್ಯೋಗಿಗಳ ಫಲಾನುಭವಿಗಳಿಗೆ, ವಯಸ್ಸಿನ ಪರಿಗಹಣೆಯಿಲ್ಲದೆ, ಕೆಲಸದ ಸ್ಥಳದಲ್ಲಿಯೇ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಶುಕ್ರವಾರ ಪ್ರಾರಂಭಿಸಿತು ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಲಸಿಕೆ ನೀಡುವ ಮೊದಲು ಎಲ್ಲಾ ಉದ್ಯೋಗಿಗಳನ್ನು ಆನ್ಲೈನ್ನಲ್ಲಿ ನೋಂದಾಯಿಸಲಾಗುತ್ತಿದೆ ಮತ್ತು ಲಸಿಕಾ ಸ್ಥಳದಲ್ಲಿ ಎಲ್ಲಾ ಕೋವಿಡ್ ಸುರಕ್ಷತಾ ಶಿμÁ್ಟಚಾರಗಳನ್ನು ಅನುಸರಿಸಲಾಗುತ್ತಿದೆ. ಇದೇ ರೀತಿಯ ಲಸಿಕಾ ಕಾರ್ಯಕ್ರಮಗಳನ್ನು ಇತರೆ ಪ್ರಮುಖ ಕೆಲಸದ ಸ್ಥಳಗಳಲ್ಲಿ ಮತ್ತು ಶಿವಮೊಗ್ಗ, ಹರಿಹರ, ಅರಸೀಕೆರೆ, ಸಕಲೇಶಪುರ ಮುಂತಾದ ರೈಲ್ವೆ ನಿಲ್ದಾಣಗಳಲ್ಲಿ ಸಹ ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಇಂದಿನಿಂದ ಮೈಸೂರು ವಿಭಾಗವು ಅರ್ಹ ಉದ್ಯೋಗಿಗಳಿಗೆ, ಮುಂಚೂಣಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಕೊಮೊರ್ಬಿಡಿಟಿ ಇರುವ ನಿವೃತ್ತ ನೌಕರರು ಹಾಗು ಅವರ ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರು ಸೇರಿದಂತೆ ಒಟ್ಟು 2419 ಪ್ರಮಾಣಗಳಷ್ಟು ಲಸಿಕೆಯನ್ನು ನೀಡಿದೆ.
ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರವರ ಮಾರ್ಗದರ್ಶನದಲ್ಲಿ ಮೈಸೂರಿನ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್.ರಾಮಚಂದ್ರ ರವರು ರೋಗನಿರೋಧಕ ಲಸಿಕಾ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಿದರು ಮತ್ತು ಕೆಲಸದ ಸ್ಥಳಗಳಲ್ಲಿ ಈ ರೀತಿಯ ಲಸಿಕಾ ಕಾರ್ಯಕ್ರಮಗಳನ್ನು ವಿಭಾಗದಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ನೈಋತ್ಯ ರೈಲ್ವೆಯಲ್ಲಿ ಮುಂಚೂಣಿ ಸಿಬ್ಬಂದಿಗೆ ರೋಗನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೊದಲ ವಿಭಾಗ ಮೈಸೂರು ಆಗಿದೆ.