ಜಿಲ್ಲಾಧಿಕಾರಿಯವರ ಅಮಚವಾಡಿ ಗ್ರಾಮ ವಾಸ್ತವ್ಯ ರದ್ದು; ತಾಲೂಕುಗಳ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಸಹ ರದ್ದು

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹರದನಹಳ್ಳಿ ಹೋಬಳಿಯ ಅಮಚವಾಡಿ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏ. 17ರಂದು ನಿಗದಿಯಾಗಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಗ್ರಾಮ ವಾಸ್ತವ್ಯ ರದ್ದಾಗಿದೆ.
ಅಲ್ಲದೆ ಕೊಳ್ಳೇಗಾಲ ತಾಲೂಕಿನ ಕಸಬಾ ಹೋಬಳಿಯ ಕರಳಕಟ್ಟೆದೊಡ್ಡಿ, ಯಳಂದೂರು ತಾಲೂಕಿನ ಅಗರ ಹೋಬಳಿಯ ಮದ್ದೂರು ಗ್ರಾಮ, ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಬೈಲೂರು ಗ್ರಾಮ, ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಮಾದಾಪಟ್ಟಣ ಗ್ರಾಮಗಳಲ್ಲಿ ಏ. 17ರಂದು ನಿಗದಿಯಾಗಿದ್ದ ಆಯಾ ತಾಲ್ಲೂಕಿನ ತಹಶಿಲ್ದಾರರ ಗ್ರಾಮ ವಾಸ್ತವ್ಯ ಕೂಡ ರದ್ದು ಮಾಡಲಾಗಿದೆ.
ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗವು ರಾಜ್ಯದಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದೆಡೆ ಗುಂಪು ಗುಂಪಾಗಿ ಸೇರುವುದನ್ನು ತಡೆಗಟ್ಟಲು ಹಾಗೂ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಪ್ರಿಲ್ ಮಾಹೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ, ಹಳ್ಳಿಗಳಿಗಳ ಭೇಟಿ ಮತ್ತು ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹೀಗಾಗಿ ಏ. 17ರಂದು ಅಮಚವಾಡಿಯಲ್ಲಿ ನಿಗದಿಯಾಗಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರದ್ದಾಗಿದೆ. ಅಲ್ಲದೇ ಆಯಾ ತಾಲ್ಲೂಕಿನ ನಿಗದಿತ ಗ್ರಾಮದಲ್ಲಿ ಏ. 17ರಂದು ನಿಗದಿಯಾಗಿದ್ದ ತಹಶಿಲ್ದಾರರ ಗ್ರಾಮ ವಾಸ್ತವ್ಯ ರದ್ದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.