ಮೈಸೂರು: ಮೈಸೂರಿನಲ್ಲಿ ಮೇ 4ರ ವರಗೆ ಅಗತ್ಯ ಸೇವೆಗಳನ್ನ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿದೆ. ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 4ರ ವರಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಹೇಳಿದರು.
ಈ ಹಿನ್ನಲೆಯಲ್ಲಿ ಮೈಸೂರಿನ ವಿವಿಧ ಬಡಾವಣೆಯಲ್ಲಿರುವ ವಾಣಿಜ್ಯ ಅಂಗಡಿಗಳು ಬಾಗಿಲನ್ನು ಗುರುವಾರ ಮಧ್ಯಾಹ್ನದಿಂದ ಸಂಪುರ್ಣವಾಗಿ ಮುಚ್ಚಿವೆ.
ಬಾರ್. ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದರು.
ಏತನ್ಮಧ್ಯೆ ನಮಗೆ ಅರ್ಧ ದಿನವಾದರೂ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಸಚಿವರಾದ ಎಸ್.ಟಿ ಸೋಮಶೇಖರ್ ಮತ್ತು ಡಾ.ಕೆ.ಸುಧಾಕರ್ ಅವರಿಗೆ ಮೈಸೂರಿನ ವರ್ತಕರು ಮನವಿ ಮಾಡಿದರು.
ಹೋಟೆಲ್ ಗಳಿಗೆ ಅವಕಾಶ ನೀಡಿ ಚಿನ್ನ, ಬಟ್ಟೆ ಅಂಗಡಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವರ್ತಕರು ಸಚಿವದ್ವಯರಿಗೆ ಮನವಿ ಸಲ್ಲಿಸಿದರು. ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದರೆ ಹೇಗೆ ಎಂದು ಸಚಿವರನ್ನು ವರ್ತಕರು ಪ್ರಶ್ನಿಸಿದರು.