ಮೈಸೂರು: ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿರುವ ಹಾಸಿಗೆಗಳ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಮಂಗಳವಾರ ಜೆ.ಎಸ್.ಎಸ್. ಆಸ್ಪತ್ರೆಗೆ ಭೇಟಿ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಿರುವ ರೋಗಿಗಳಿಗೆ ಬೇಕಾಗುವಷ್ಟು ರೆಮ್‍ಡಿಸಿವಿರ್ ಔಷಧ ಲಭ್ಯವಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನಲ್ಲಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಿಗೂ ಬೇಡಿಕೆಗೆ ಅನುಗುಣವಾಗಿ ರೆಮ್‍ಡಿಸಿವಿರ್ ಸರಬರಾಜು ಆಗಿದೆ. ಇವುಗಳನ್ನು ಹೊರತಾದ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‍ಡಿಸಿವಿರ್ ಪೂರೈಕೆಯಲ್ಲಿ ತೊಂದರೆಯಾಗಿದೆ. ಎರಡು ಮೂರು ದಿನದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಔಷಧ ಪೂರೈಕೆ ಆಗಲಿದೆ ಎಂದರು.
ಇವತ್ತಿಗೆ 2000 ರೆಮ್ಡಿಸಿವಿರ್ ಔಷಧ ಬೇಕಾಗಿದೆ. ನೆನ್ನೆ 378 ರೆಮ್ಡಿಸಿವಿರ್ ಬಂದಿದೆ. ಇನ್ನೂ ಬೆಕಾಗಿರುವ ಔಷಧ ಪೂರೈಕೆಗೆ ಮಾಹಿತಿ ಕೊಟ್ಟಿದ್ದೇವೆ. ಔಷಧ ಬರುತ್ತಿದೆ ಎಂದರು.
ಜೆ.ಎಸ್.ಎಸ್. ಆಸ್ಪತ್ರೆಯು ಈಗಾಗಲೇ 411 ಹಾಸಿಗೆಗಳನ್ನು ಸರ್ಕಾರಕ್ಕೆ ಕೊಟ್ಟಿದೆ. ಇನ್ನೂ 100 ಆಕ್ಸಿಜನ್ ಹಾಸಿಗೆಗಳನ್ನು ನೀಡುವಂತೆ ಕೇಳಿದ್ದೇವೆ. ಪೂರಕವಾಗಿ ಸ್ಪಂದಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದರು.
ಖಾಸಗಿ ಆಸ್ಪತ್ರೆಗಳು ಶೇಕಡ 20 ರಿಂದ 50 ರಷ್ಟು ಹಾಸಿಗೆಗಳನ್ನು ಕೊಟ್ಟಿದ್ದಾರೆ. ಎಲ್ಲರೂ ಸಹಕರಿಸುತ್ತಿದ್ದಾರೆ. ಅಧಿಕ ದರ ವಸೂಲಿ ಮಾಡಲು ಅವಕಾಶ ನೀಡುವುದಿಲ್ಲ. ಹಾಗೇನಾದರೂ ದೂರು ಬಂದರೆ ಶಿಸ್ತು ಕ್ರಮವಹಿಸಲಾಗುವುದು ಎಂದರು.
ಕೆ.ಆರ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಹೆಚ್ಚಿಸಲಾಗುತ್ತಿದೆ. ಕೋವಿಡ್ ಪಾಸಿಟಿವ್ ಬಂದವರಿಗೆಲ್ಲಾ ಆಕ್ಸಿಜನ್ ಬೆಡ್ ಬೇಕಾಗಿಲ್ಲ. ಆದರೆ ಎಲ್ಲರೂ ಆಕ್ಸಿಜನ್ ಬೆಡ್ ನಿರೀಕ್ಷಿಸುತ್ತಿದ್ದಾರೆ. ಆಕ್ಸಿಜನ್ ಹಾಗೂ ಐ.ಸಿ.ಯು. ಬೇಕಾ ಎಂಬುದನ್ನು ವೈದ್ಯರು ತೀರ್ಮಾನಿಸುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್, ಐ.ಸಿ.ಯು. ಒದಗಿಸಲಾಗುವುದು. ಐ.ಸಿ.ಯು ಮತ್ತು ಆಕ್ಸಿಜನ್ ಬೆಡ್ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದರು.
18 ವರ್ಷ ಮೀರಿದವರಿಗೆ ಉಚಿತವಾಗಿ ಲಸಿಕೆ ನೀಡಲು ಸರ್ಕಾರ 2600 ಕೋಟಿ ರೂ. ಅನುದಾನ ಒದಗಿಸಿದೆ. ಎಲ್ಲರೂ ಲಸಿಕೆ ಒದಗಿಸಲಾಗುವುದು ಎಂದರು.
ಕೋವಿಡ್ ನಿಯಂತ್ರಣಕ್ಕೆ 14 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಹಾಗೂ ಅಗತ್ಯ ಕೈಗಾರಿಕಾ, ಸೇವಾ ಚಟುವಟಿಕೆಗೆ ನಿಬರ್ಂಧವಿಲ್ಲ. ಇದಲ್ಲದೆ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆ ವರೆಗೆ ಅಗತ್ಯ ಆಹಾರ ಮತ್ತು ಅತ್ಯಾವಶ್ಯಕ ವಸ್ತು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮೈಸೂರು ಜನತೆಯಲ್ಲಿ ಮನವಿ ಮಾಡುತ್ತೇನೆ. 14 ದಿನಗಳ ಲಾಕ್ ಡೌನ್‍ಗೆ ಸಹಕಾರ ನೀಡಿದರೆ ಮಾತ್ರ ಈ ಕೊರೊನಾ ಸರಪಳಿಯನ್ನು ಮುರಿಯಲು ಸಾಧ್ಯ ಎಂದರು.