ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 500 ಹಾಸಿಗೆ ನೀಡಲು ಸುತ್ತೂರು ಶ್ರೀಗಳಿಗೆ ಮನವಿ

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಕೋವಿಡ್ ಚಿಕಿತ್ಸೆಗೆ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಮನವಿ ಮಾಡಿದರು.
ಸರ್ಕಾರ ನಿಯೋಜಿಸುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಇನ್ನೂ 500 ಹಾಸಿಗೆಗಳನ್ನು, ಮುಖ್ಯವಾಗಿ ಆಕ್ಸಿಜನೇಟೆಡ್ ಹಾಸಿಗಳನ್ನು ಒದಗಿಸುವಂತೆ ಮಾಡಿದ ಮನವಿಗೆ ಶ್ರೀಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕೊರತೆ ನೀಗಲು ಜೆ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎಂ.ಎಂ.ಸಿ & ಆರ್.ಐ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿರುವ ಎಂ.ಬಿ.ಬಿ.ಎಸ್. ಹಾಗೂ ಫಾರ್ಮಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಬಳಸಿಕೊಳ್ಳುವ ಬಗ್ಗೆಯು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಡಾ.ಯತಿಂದ್ರ ಸಿದ್ದರಾಮಯ್ಯ, ಅಶ್ವಿನ್ ಕುಮಾರ್, ಹರ್ಷವರ್ಧನ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.