ಸ್ವಲ್ಪ ಎಡವಿದರೂ ತಪ್ಪು ಸಂದೇಶ ಹೋಗುತ್ತದೆ ಎಚ್ಚರವಹಿಸಿ: ಅಧಿಕಾರಿಗಳಿಗೆ ಸಚಿವ ಎಸ್ ಟಿ.ಸೋಮಶೇಖರ್ ಸೂಚನೆ

ಮೈಸೂರು: ಕೋವಿಡ್-19 ವಿಚಾರದಲ್ಲಿ ಒಳ್ಳೆಯ ಕೆಲಸ ಮಾಡಿ ಶೇ. 1ರಷ್ಟು ಎಡವಿದರೂ ತಪ್ಪು ಸಂದೇಶ ಹೋಗುತ್ತದೆ ಆದ್ದರಿಂದ ಅಧಿಕಾರಿಗಳು ತುಂಬಾ ಎಚ್ಚರದಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋವಿಡ್-19 ಸ್ಥಿತಿಗತಿಯ ಕುರಿತು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ ಸಚಿವರು ಮಾತನಾಡಿದರು.
ಈ ವರೆಗೆ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಪರಿಶೀಲನಾ ಸಭೆ ನಡೆಸಿದ್ದೇನೆ. ಬೆಂಗಳೂರು ಹಾಗೂ ಅಕ್ಕಪಕ್ಕದ ಜಿಲ್ಲೆಯ ಜನರು ಮೈಸೂರಿಗೆ ಬರುತ್ತಿರುವ ಕಾರಣ ಕೋವಿಡ್ ಸಂಖ್ಯೆ ಹೆಚ್ಚಿದ್ದು, ಮೈಸೂರು ತಾಲ್ಲೂಕು ಕಠಿಣ ಸ್ಥಿತಿ ತಲುಪಿದೆ ಎಂದರು.
ಸರ್ಕಾರದ ಆದೇಶದಂತೆ ಮೇ1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಎಲ್ಲರಿಗೂ ಉಚಿತ ಲಸಿಕೆ ನೀಡಲು ಸರ್ಕಾರ 2600ಕೋಟಿ ರೂ. ವಿನಿಯೋಗಿಸುತ್ತಿದೆ. ಕೋವಿಡ್-19 ಸ್ಥಿತಿಗತಿ ಮತ್ತು ಬೆಳವಣಿಗೆಯ ಕುರಿತು ಪ್ರತಿದಿನ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸಚಿವ ಎಸ್.ಟಿ.ಎಸ್. ಸೂಚಿಸಿದರು.