ಮೈಸೂರು: ಚಾಮರಾಜನಗರದಲ್ಲಿ ಕೋವಿಡ್ ಸೋಂಕಿತರ ಸಾವು ಸಂಬಂಧ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಗದ್ಗದಿತರಾದರು.
ನಗರದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿಸುವ ವೇಳೆ ಗದ್ಗದಿತರಾದರು.
ಚಾಮರಾಜನಗರದಲ್ಲಿ ಆಗಿರುವ ಘಟನೆಗೆ ನೋವಿದೆ. ಇದರಿಂದ ನನಗೆ ತುಂಬಾ ನೋವಾಗಿದೆ. ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದೂ ಈ ರೀತಿ ಕೆಲಸ ಮಾಡಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಆದ ಸಾವು ಸಾವೇ. ಸತ್ತವರ ಮನೆಯಲ್ಲಿ ನೋವಿರುತ್ತದೆ. ಈ ವೇಳೆ ಈ ರೀತಿ ಆರೋಪ ಮಾಡಬಾರದು. ಮಾಡಿದರೆ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುತ್ತದೆ. ಅವರು ಮಾಧ್ಯಮದಲ್ಲಿ ಹೇಳಿಕೆ ನೀಡದಿದ್ದರೆ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರು ಅಸತ್ಯವಾದ ವಿಚಾರಗಳನ್ನು ಹೇಳಿದ್ದಾರೆ. ಅದಕ್ಕೆ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ರೋಹಿಣಿ ಸಿಂಧೂರಿ ಹೇಳಿದರು.
ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ಚಾಮರಾಜನಗರಕ್ಕೆ ಕಷ್ಟದ ವೇಳೆ ಸ್ಪಂದಿಸಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಅವರ ಕಷ್ಟ ಕಾಲದಲ್ಲಿ ರಿಸ್ಕ್ ತೆಗೆದುಕೊಂಡು ಆಕ್ಸಿಜನ್ ಕಳುಹಿಸಿದ್ದೇವೆ. ನಾವು ಜಿಲ್ಲಾ ಆಸ್ಪತ್ರೆಯಲ್ಲಿದ್ದ 40 ಸಿಲಿಂಡರ್ ಕಳುಹಿಸಿದ್ದೇವೆ. ಎಲ್ಲೂ ಸಹ ಆಸ್ಪತ್ರೆಯಿಂದ ಕಳುಹಿಸಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಇದು ಮಾನವೀಯತೆ ಅಲ್ವಾ ಎಂದು ರೋಹಿಣಿ ಸಿಂಧೂರಿ ಅವರು ಪ್ರಶ್ನಿಸಿದರು.
ಆಕ್ಸಿಜನ್ ನ್ನು ಮೊದಲೇ ಕೇಳಿದ್ದರೆ ಮೊದಲೇ ಕಳುಹಿಸುತ್ತಿದ್ದೆವು. ಅವರು ಸರಿಯಾಗಿ ನಿರ್ವಹಣೆ ಮಾಡದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೆವು. ಅವರು ಆ ಕೆಲಸ ಮಾಡಿಲ್ಲ. ನಾವು ಜನರ ಪ್ರಾಣ ಉಳಿಸಲು 24*7ಕೆಲಸ ಮಾಡುತ್ತಿದ್ದೇವೆ ಎಂದು ರೋಹಿಣಿ ಸಿಂಧೂರಿ ಹೇಳಿದರು.