ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಜೊತೆಗೆ ಬಿಬಿಎಂಪಿ ಕಾರ್ಯನಿರ್ವಹಣೆ ಬಗ್ಗೆ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ರಾಜರಾಜೇಶ್ವರಿ ನಗರ ವಲಯದ ಕೋವಿಡ್ ವಾರ್ ರೂಂಗೆ ದಿಡೀರ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಯಾವುದೇ ಕಾರಣಕ್ಕೂ ನಾಗರಿಕರಿಗೆ ಸಮಸ್ಯೆಯಾಗಕೂಡದು. ಅವರು ಸಹಾಯಕ್ಕಾಗಿ ಕರೆ ಮಾಡಿದಾಗ ಸಮಾಧಾನವಾಗಿ ಸ್ಪಂದಿಸಿ, ಬೆಡ್ ವ್ಯವಸ್ಥೆ ಬೇಕಿರುವವರಿಗೆ ತಕ್ಷಣ ಅವಕಾಶ ಮಾಡಿಕೊಡಿ ಎಂದು ಸಚಿವದ್ವಯರು ವಾರ್ ರೂಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಬೆಡ್ ಬುಕ್ಕಿಂಗ್ ದಂಧೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ. ಒಂದು ವೇಳೆ ನಿಮ್ಮನ್ನು ಈ ದಂಧೆಗಾಗಿ ಯಾರಾದರೂ ಸಂಪರ್ಕಿಸಿದರೆ ನಮ್ಮ ಗಮನಕ್ಕೆ ತನ್ನಿ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಆರ್.ಅಶೋಕ್ ಅವರುಗಳು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಕೊರೊನಾ ಸೋಂಕು ದೃಢಪಟ್ಟು ಹೋಂ ಐಸೋಲೇಶನ್ ನಲ್ಲಿರುವ ರಾಜರಾಜೇಶ್ವರಿ ವಲಯ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯ ಎಲ್ಲರ ಮನೆಗಳಿಗೂ ಮೆಡಿಕಲ್ ಕಿಟ್ ಅನ್ನು ಕೊಡಬೇಕು. ಕೂಡಲೇ ಮೆಡಿಕಲ್ ಕಿಟ್ ತಯಾರಿಸಿ ತುರ್ತಾಗಿ ಕೊಡಲು ಸೂಚಿಸಿದರು.
ಸಚಿವ ಎಸ್.ಟಿ. ಸೋಮಶೇಖರ್ ಅವರು, ಭಾನುವಾರ ಕೆಂಗೇರಿ ಹೋಬಳಿ ರಾಮೋಹಳ್ಳಿ ಗ್ರಾಮ ಪಂಚಾಯಿತಿ ಮತ್ತು ತಾವರೆಕೆರೆ ಹೋಬಳಿ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ 1 ಲಕ್ಷ ರೂಪಾಯಿ ವೈಯಕ್ತಿಕ ಸಹಾಯ ಧನ ವಿತರಣೆ ಮಾಡಿದರು.