ಮೈಸೂರು: ಸರ್ಕಾರಗಳು, ಸಂಘಸಂಸ್ಥೆಗಳು, ವೈದ್ಯರುಗಳು ಸಂಬಂಧಪಟ್ಟ ಎಲ್ಲರೂ ಯುದ್ಧೋಪಾದಿಯಲ್ಲಿ ಪರಿಹಾರಕ್ಕಾಗಿ ಮುಂದಾಗಿದ್ದರೂ ಕರೋನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಆಚಾರ್ಯ ಮಹಾಸಭಾದ ಸಂತರೆಲ್ಲರೂ ಆತಂಕ ವ್ಯಕ್ತಪಡಿಸಿದ್ದಾರೆ. ಮೇ 11ರಂದು ಡಿಜಿಟಲ್ ಮಾಧ್ಯಮದ ಮೂಲಕ ಏರ್ಪಡಿಸಲಾಗಿದ್ದ ಆಚಾರ್ಯ ಮಹಾಸಭಾದಲ್ಲಿ ಭಾಗವಹಿಸಿದ್ದ ಪೂಜ್ಯರುಗಳು ಹಿಂದಿಗಿಂತಲೂ ಇಂದು ಈ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಮುಂದೆ ಬರಬೇಕಿದೆ. ಈ ಸೋಂಕು ಹರಡದಂತೆ ಸರ್ಕಾರ ನೀಡಿರುವ ಮುನ್ನೆಚ್ಚರಿಕೆ ಅಂಶಗಳನ್ನು ಪಾಲಿಸುವುದು ಅಗತ್ಯವಿದೆ. ಈ ಸೋಂಕಿನ ದುಷ್ಪರಿಣಾಮಗಳು ಕಣ್ಣೆದುರಿಗೇ ಕಾಣುತ್ತಿರುವಾಗ ಈ ಕಷ್ಟದ ಸಂದರ್ಭದಲ್ಲಿ ನಾಗರಿಕರು ಉದಾಸೀನ ಭಾವನೆ ತಾಳದೆ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಹೇಳಿದ್ದಾರೆ.
ತಜ್ಞರ ಮಾರ್ಗದರ್ಶನದಲ್ಲಿ ಪ್ರಾರ್ಥನೆ, ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಸಾವು-ನೋವುಗಳ ಬಗೆಗೆ ಬಿತ್ತರವಾಗುತ್ತಿರುವ ವರದಿಗಳು ಜನರನ್ನು ಮತ್ತಷ್ಟು ಭಯಭೀತಗೊಳಿಸುತ್ತಿವೆ. ಮಾಧ್ಯಮಗಳು ಸಾಧ್ಯವಾದಷ್ಟು ಸಕಾರಾತ್ಮಕವಾಗಿ ಸಂಗತಿಗಳನ್ನು ಬಿತ್ತರಿಸಿ ಜನರಲ್ಲಿ ಶಾಂತಿ, ಸಮಾಧಾನ, ಧೈರ್ಯ, ವಿಶ್ವಾಸಗಳು ಮೂಡುವಂತಹ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಪ್ರಸಾರ ಮಾಡಿದರೆ ಅನುಕೂಲವಾಗುತ್ತದೆ. ಭಯ-ಭೀತಿ ಇವುಗಳು ಸೋಂಕಿನ ಉಲ್ಬಣಕ್ಕೆ ಪರೋಕ್ಷವಾಗಿ ಕಾರಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೀವನದಲ್ಲಿ ಸಂತೋಷದಿಂದ ಇರಬೇಕು. ಜನರೂ ಸಹ ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಆಹಾರ ಪದ್ಧತಿಯು ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗಬೇಕು. ದೇಶದ ಸಮಸ್ತ ಜನತೆ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಈ ಸಮಸ್ಯೆಯನ್ನು ಎದುರಿಸಬೇಕೆಂದು ಕರೆ ನೀಡಿದೆ.
ಸಭೆಯಲ್ಲಿ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಶ್ರೀ ಸ್ವಾಮಿ ಅವದೇಶಾನಂದ ಗಿರಿಯವರು, ಶ್ರೀ ಬಾಬಾ ರಾಮದೇವ್‍ರವರು, ಶ್ರೀ ಪರಮಾತ್ಮನಂದ ಸರಸ್ವತಿಯವರು, ಆಚಾರ್ಯ ಕೃಷ್ಣಮಣಿ ಮಹಾರಾಜ್‍ರವರು, ಶ್ರೀ ಗೀತಮನಿಷಿ ಸ್ವಾಮೀಜಿಯವರು, ಶ್ರೀ ಮಾಧ್ವಪ್ರಿಯ ದಾಸಜಿ ಸ್ವಾಮಿಗಳು, ಶಾಂತಿಕುಂಜ್‍ನ ಶ್ರೀ ಪ್ರಣವ್ ಪಾಂಡೆಜೀಯವರು, ಭಾಯ್ ಶ್ರೀ ರಮೇಶ್ ಭಾಯ್ ಓಝಾಜೀಯವರು ಹಾಗೂ ಶ್ರೀ ಮಿಲಮ್ ಬೊಮ್ಮಾಪುರಂ ಅಧೀನಂ ಶ್ರೀಗಳು ಭಾಗವಹಿಸಿದ್ದರು.